ಬಳ್ಳಾರಿ, ಎ.08: ನಗರದ 10ನೇ ವಾರ್ಡ್ ಪ್ರದೇಶದ ವಿವಿಧೆಡೆ ಒಳ ಚರಂಡಿ, ಹೊರ ಚರಂಡಿ, ರಸ್ತೆ, ಕುಡಿಯುವ ಸಿಹಿ ನೀರು, ಬೋರ್’ವೆಲ್ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಮಹಾನಗರ ಪಾಲಿಕೆಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಶಾಸಕ ನಾರಾ ಭರತ್ ರೆಡ್ಡಿ ಸೂಚನೆ ನೀಡಿದರು.
‘ಸಲಾಂ ಬಳ್ಳಾರಿ ಅಭಿಯಾನ’ದ ಅಂಗವಾಗಿ ವಾರ್ಡ್ ಸಂಖ್ಯೆ 10ರ ವಿವಿಧ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಮರಿಸ್ವಾಮಿ ಮಠದಲ್ಲಿ ಪೂಜೆಯನ್ನು ಸಲ್ಲಿಸಿ, ವಾರ್ಡ್ ಭೇಟಿ ಆರಂಭಿಸಿದರು.
ಸಲಾಂ ಬಳ್ಳಾರಿ ಅಭಿಯಾನಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ, ಈಗಾಗಲೇ ಭೇಟಿ ನೀಡಲಾಗಿರುವ ವಾರ್ಡ್ ಸಂಖ್ಯೆ 06 ಮತ್ತು 13ರಲ್ಲಿನ ಸಮಸ್ಯೆಗಳನ್ನು ಆಧರಿಸಿ ಅಂದಾಜು 3 ಕೋಟಿ 50 ಲಕ್ಷ ರೂ.ಗಳ ಅನುದಾನದಡಿ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಿಯಾ ಯೋಜನೆ ಸಿದ್ಧ ಆಗಿದ್ದು, ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು, ಅದೇ ರೀತಿ ವಾರ್ಡ್ ಸಂಖ್ಯೆ 10ರಲ್ಲಿರುವ ಸಮಸ್ಯೆಗಳನ್ನು ಆಧರಿಸಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಇಡೀ ದಿನ ವಾರ್ಡಿನಾದ್ಯಂತ ಸಂಚಾರ ನಡೆಸಿದ ಶಾಸಕ ನಾರಾ ಭರತ್ ರೆಡ್ಡಿ, ವಾರ್ಡಿನ ಮರಿಸ್ವಾಮಿ ಮಠದ ಸುತ್ತಮುತ್ತ ಪ್ರದೇಶ, ಪಾತಕಂದಕಂ ಬೀದಿ, ರಾಣಿ ತೋಟ, ಚಾಳೇಶ್ವರ ದೇವಸ್ಥಾನ ಪ್ರದೇಶ, ಇಲಾಹಿ ದಾದ್ ಮೊಹಲ್ಲಾ, ಟಿಜಿಬಿ ಮಿಲ್ ಪ್ರದೇಶ, ತುಂಗಭದ್ರಾ ಲೇನ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು.
ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಅಹವಾಲು ಸ್ವೀಕರಿಸಿದರು, ಆರೋಗ್ಯ ತಪಾಸಣೆಗೆ ಆರ್ಥಿಕ ನೆರವು ಕೋರಿದ ಹಲವು ಜನರಿಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡಿದರು.
ವಾರ್ಡ್ ಭೇಟಿಯ ಆರಂಭದಲ್ಲಿ ಮರಿಸ್ವಾಮಿ ಮಠದ ಆವರಣದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಶಾಸಕ ನಾರಾ ಭರತ್ ರೆಡ್ಡಿಯವರನ್ನು ಸನ್ಮಾನಿಸಿ, ವಾರ್ಡಿಗೆ ಸ್ವಾಗತಿಸಿದರು.
ಪಾತಕಂದಕಂ ಬೀದಿಯ ಇಲಾಹಿ ಮಸೀದಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಶಾಸಕರನ್ನು ಸನ್ಮಾನಿಸಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ತೆಂಗಿನಕಾಯಿ ರಾಜಣ್ಣ, ತೆಂಗಿನಕಾಯಿ ಬಸವರಾಜ, ಮಡಿವಾಳಪ್ಪ, ತಿಮ್ಮಪ್ಪ, ಪೃಥ್ವಿರಾಜ, ಹರೀಶ್, ಎಂ.ಡಿ.ತೌಸಿಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಸೇನ್ ಪೀರಾಂ, ವೆಂಕಟೇಶ ಹೆಗಡೆ, ರಾಕೇಶ್ ವರ್ಮಾ, ಚಾನಾಳ್ ಶೇಖರ್, ರಜಾಕ್ ಮೊದಲಾದವರು ಹಾಜರಿದ್ದರು.