ಬಳ್ಳಾರಿ, ಅ. 14: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಡೂರು ಪಟ್ಟಣಕ್ಕೆ ಭೇಟಿ ನೀಡಿರುವುದು ಉಪ ಚುನಾವಣಾ ಗಿಮಿಕ್ ಆಗಿದ್ದು, ಈ ಕ್ಷೇತ್ರದ ಪ್ರಬುದ್ಧ ಮತದಾರರು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಮತ್ತು ಅವ್ಯವಹಾರಗಳನ್ನು ಗಮನಿಸಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ವೈ.ಎಂ. ಸತೀಶ್ ಅವರು, ಉಪ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನಡೆಸುತ್ತಿರುವ ಭೂಮಿಪೂಜೆ, ಉದ್ಘಾಟನೆ, ಶಂಕುಸ್ಥಾಪನೆ, ಸಾಧನಾ ಸಮಾವೇಶ ಇನ್ನಿತರೆಗಳು ಎಲ್ಲವೂ ಚುನಾವಣಾ ಗಿಮಿಕ್ಗಳು. ಕರ್ನಾಟಕ ಸರ್ಕಾರದಲ್ಲಿ ಹಣದ ಕೊರತೆ ಇರುವುದಾಗಿ ಪದೇ ಪದೇ ಹೇಳುತ್ತಿರುವ ಮುಖ್ಯಮಂತ್ರಿಗಳು, ಯಾವ ನೈತಿಕತೆಯ ಆಧಾರದ ಮೇಲೆ ಸಂಡೂರು ಪಟ್ಟಣಕ್ಕೆ ಭೇಟಿ ನೀಡಿ, ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದಾರೆ ಎನ್ನವುದು ಮತದಾರರಿಗೆ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಟೀಕಿಸಿದ್ದಾರೆ.
ಸಂಸದ ಇ. ತುಕಾರಾಂ ಅವರ ಆಯ್ಕೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ 20.19 ಕೋಟಿ ರೂಪಾಯಿ ವ್ಯಯ ಆಗಿರುವುದು ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ನಮೂದಾಗಿದೆ. ಈ ಬಗ್ಗೆ ವಾಲ್ಮೀಕಿ ಸಮುದಾಯಕ್ಕೆ ಮುಖ್ಯಮಂತ್ರಿಗಳು ಈ ವೇದಿಕೆಯಲ್ಲಿಯೇ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಗೃಹಲಕ್ಷ್ಮಿ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಸೇರಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಣ ಸಮರ್ಪಕವಾಗಿ ಪಾವತಿ ಆಗುತ್ತಿಲ್ಲ. ತಾಂತ್ರಿಕ ದೋಷ, ಆಧಾರ್ ಲಿಂಕ್ ಇನ್ನಿತರೆ ಕಾರಣಗಳನ್ನು ನೆಪವಾಗಿ ಹೇಳಿ, ಅಧಿಕಾರಿಗಳು ಫಲಾನುಭವಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ 85,410 ವಿಧವೆಯರು, ಸಂಧ್ಯಾ ಸುರಕ್ಷದಲ್ಲಿ 53,364, ವೃದ್ಧಾಪ್ಯ ವೇತನದಲ್ಲಿ 1,02,701 ಫಲಾನುಭವಿಗಳು, 34,244 ವಿಕಲಚೇತನರು, ಇತರೆ 2998 ಸೇರಿ ಒಟ್ಟು 2,78,225 ಫಲಾನುಭವಿಗಳಿದ್ದಾರೆ. ಇವರಲ್ಲಿ ಅದೆಷ್ಟು ಫಲಾನುಭವಿಗಳಿಗೆ ಸಮರ್ಪಕವಾಗಿ ಹಣ ಪಾವತಿಯಾಗುತ್ತಿದೆ ಎನ್ನುವುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಚುನಾವಣಾ ಗಿಮಿಕ್ ತಂತ್ರಕ್ಕೆ ಸಂಡೂರು ಕ್ಷೇತ್ರದ ಮತದಾರರು ಮರುಳಾಗುವುದಿಲ್ಲ. ಶೀಘ್ರದಲ್ಲಿಯೇ ಘೋಷಣೆ ಆಗಲಿರುವ ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.