ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ಸಂಜೆ 6 ಗಂಟೆಗೆ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ವಿವಿಧ ರಾಜ್ಯಗಳ 102 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ.60 ರಷ್ಟು ಮತದಾನವಾಗಿದೆ.
21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಮತದಾನ ಮುಕ್ತಾಯಗೊಂಡಾಗ ಸುಮಾರು ಶೇ.60 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಶೇ. 77.57 ರಷ್ಟು ವೋಟಿಂಗ್ ಆಗಿದೆ. ತಮಿಳುನಾಡಿನಲ್ಲಿ ಶೇ.63.2, ರಾಜಸ್ಥಾನದಲ್ಲಿ ಶೇ.50.3, ಉತ್ತರ ಪ್ರದೇಶದಲ್ಲಿ ಶೇ.57.5 ಮತ್ತು ಮಧ್ಯಪ್ರದೇಶದಲ್ಲಿ ಶೇ.63.3ರಷ್ಟು ಮತದಾನವಾಗಿದೆ.
ಮೊದಲ ಹಂತದಲ್ಲಿ ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆದಿದೆ. ರಾಜಸ್ಥಾನ (12), ಉತ್ತರ ಪ್ರದೇಶ (8), ಮಧ್ಯಪ್ರದೇಶ (6), ಉತ್ತರಾಖಂಡ (5), ಅರುಣಾಚಲ ಪ್ರದೇಶ (2), ಮೇಘಾಲಯ (2), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1), ಮಿಜೋರಾಂ (1) ), ನಾಗಾಲ್ಯಾಂಡ್ (1), ಪುದುಚೇರಿ (1), ಸಿಕ್ಕಿಂ (1) ಮತ್ತು ಲಕ್ಷದ್ವೀಪ (1). ಅಲ್ಲದೆ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5, ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಮಣಿಪುರದಲ್ಲಿ ಎರಡು ಮತ್ತು ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ಮತ್ತು ಛತ್ತೀಸ್ಗಢದಲ್ಲಿ ತಲಾ 1 ಸ್ಥಾನಗಳಲ್ಲಿ ಚುನಾವಣೆ ನಡೆದಿದೆ.
ಲೋಕಸಭಾ ಚುನಾವಣೆಯ ಜೊತೆಗೆ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಕ್ರಮವಾಗಿ 67.5 ಮತ್ತು 64.7 ರಷ್ಟು ಮತದಾನವಾಗಿದೆ.
ಮೊದಲ ಹಂತದಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಕಿರಣ್ ರಿಜಿಜು ಮತ್ತು ಅರ್ಜುನ್ ರಾಮ್ ಮೇಘವಾಲ್ ಅವರು ಸೇರಿದಂತೆ 102 ಕ್ಷೇತ್ರಗಳ ಒಟ್ಟು 1625 ಅಭ್ಯರ್ಥಿಗಳ ಭವಿಷ್ಯ ಇವಿಎಂ ಸೇರಿದೆ.