ನಟ ಅಜಯ್ ದೇವಗನ್ (Ajay Devgn) ಅವರು ‘ದೃಶ್ಯಂ’ ಸಿನಿಮಾದಲ್ಲಿ ಮಗಳನ್ನು ರಕ್ಷಿಸಲು ದೊಡ್ಡ ರಿಸ್ಕ್ ತೆಗೆದುಕೊಳ್ಳುವ ತಂದೆಯ ಪಾತ್ರ ಮಾಡಿದ್ದರು. ಈಗ ಅದೇ ರೀತಿಯ ಮತ್ತೊಂದು ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ‘ಶೈತಾನ್’ ಸಿನಿಮಾದಲ್ಲಿ ಅವರು ತಂದೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಏನೆಂದರೆ, ಈ ಸಿನಿಮಾದಲ್ಲಿ ಆರ್. ಮಾಧವನ್ (R Madhavan) ವಿಲನ್! ಹೌದು, ‘ಶೈತಾನ್’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಕಥೆ ಏನು ಎಂಬುದರ ಸುಳಿವು ಸಿಕ್ಕಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಮತ್ತು ಜ್ಯೋತಿಕಾ ಅವರು ಪತಿ-ಪತ್ನಿಯಾಗಿ ನಟಿಸಿದ್ದಾರೆ. ವಶೀಕರಣದ ಕಹಾನಿಯನ್ನು ಈ ಚಿತ್ರ ಒಳಗೊಂಡಿದೆ. ಸದ್ಯಕ್ಕೆ ‘ಶೈತಾನ್’ ಟ್ರೇಲರ್ (Shaitaan Trailer) ನೋಡಿದ ಪ್ರೇಕ್ಷಕರಿಗೆ ನಡುಕ ಹುಟ್ಟಿದೆ. ಇನ್ನು, ಪೂರ್ತಿ ಸಿನಿಮಾ ಎಷ್ಟರಮಟ್ಟಿಗೆ ಭಯಾನಕವಾಗಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.
ಸಹಾಯ ಕೇಳಿಕೊಂಡು ಆರ್. ಮಾಧವನ್ ಅವರು ಅಜಯ್ ದೇವಗನ್ರ ಮನೆಗೆ ಎಂಟ್ರಿ ನೀಡುತ್ತಾರೆ. ಬಳಿಕ ಅವರ ಮಗಳನ್ನು ವಶೀಕರಣ ಮಾಡುತ್ತಾರೆ. ಅಲ್ಲಿಂದ ಶುರುವಾಗುವುದು ಅಸಲಿ ಸಮರ. ವಿಲನ್ ಹೇಳಿದಂತೆಯೇ ಹೀರೋನ ಮಗಳು ಕೇಳುತ್ತಾಳೆ. ತಂದೆ-ತಾಯಿಗೆ ಹೊಡೆಯಲೂ ಆಕೆ ಹಿಂಜರಿಯುವುದಿಲ್ಲ. ಅಷ್ಟರಮಟ್ಟಿಗೆ ಪವರ್ಫುಲ್ ಆಗಿರುತ್ತದೆ ಶೈತಾನನ ವಶೀಕರಣ! ಇಂಥ ಹಾರರ್ ಕಹಾನಿಯನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ.
ಮಾರ್ಚ್ 8ರಂದು ‘ಶೈತಾನ್’ ಸಿನಿಮಾ ಬಿಡುಗಡೆ ಆಗಲಿದೆ. ಖ್ಯಾತ ನಿರ್ದೇಶಕ ವಿಕಾಸ್ ಬೆಹ್ಲ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಟ್ರೇಲರ್ನಲ್ಲಿನ ಹಾರರ್ ದೃಶ್ಯಗಳನ್ನು ನೋಡಿ ಸಿನಿಪ್ರಿಯರ ನಿರೀಕ್ಷೆ ಹೆಚ್ಚಾಗಿದೆ. ಇದು ಖಂಡಿತವಾಗಿಯೂ ಬ್ಲಾಕ್ ಬಸ್ಟರ್ ಸಿನಿಮಾ ಆಗಲಿದೆ ಎಂದು ಅಭಿಮಾನಿಗಳು ಭವಿಷ್ಯ ನುಡಿಯುತ್ತಿದ್ದಾರೆ. ಜ್ಯೋತಿಕಾ, ಅಜಯ್ ದೇವಗನ್, ಆರ್. ಮಾಧವನ್ ಅವರಂತಹ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿರುವುದರಿಂದ ಸಹಜವಾಗಿಯೇ ಹೈಪ್ ಹೆಚ್ಚಾಗಿದೆ.
ಅಜಯ್ ದೇವಗನ್ ಅವರ ಮಗಳ ಪಾತ್ರದಲ್ಲಿ ಜಾನಕಿ ಬೋಡಿವಾಲಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಸಖತ್ ಸ್ಕೋಪ್ ಇದೆ. ವಶೀಕರಣಕ್ಕೆ ಒಳಗಾದ ಯುವತಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಿಂದ ಅವರ ವೃತ್ತಿಜೀವನದ ಮೈಲೇಜ್ ಹೆಚ್ಚಲಿದೆ. ಸದ್ಯ ಯೂಟ್ಯೂಬ್ನಲ್ಲಿ ‘ಶೈತಾನ್’ ಟ್ರೇಲರ್ ನಂಬರ್ 1 ಟ್ರೆಂಡಿಂಗ್ನಲ್ಲಿದೆ. ಅಷ್ಟರಮಟ್ಟಿಗೆ ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. 24 ಗಂಟೆ ಕಳೆಯುವುದಕ್ಕೂ ಮುನ್ನ 15 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ.