ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ.೧೯: ಮಹಾಯೋಗಿ ವೇಮನ ತತ್ವಗಳು ಇಂದಿಗೂ ಆದರ್ಶವಾಗಿದ್ದು, ಅವರ ತತ್ವಗಳನ್ನು ಅಳವಡಿಸಿಕೊಂಡವರು ರೆಡ್ಡಿ ಸಮಾಜದವರು ಎಂದು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ಕುಮಾರ್ ರಸ್ತೆಯ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿ ವೇದಿಕೆ ಕಾರ್ಯಕ್ರಮವನ್ನು ವೇಮನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರೆಡ್ಡಿ ಸಮುದಾಯದವರು ಆರ್ಥಿಕವಾಗಿ ಸಬಲರು. ಸಂಕಷ್ಟದಲ್ಲಿರುವ ಜನರಿಗೆ ತಕ್ಷಣ ಆರ್ಥಿಕವಾಗಿ ನೆರವಾಗುವ ಸಹಾಯ ಮನೋಭಾವನೆ ಮತ್ತು ನಾಯಕತ್ವದ ಗುಣಗಳನ್ನು ರೆಡ್ಡಿ ಸಮುದಾಯವರು ಹೊಂದಿದ್ದಾರೆ ಎಂದರು.
ರೆಡ್ಡಿ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು, ನಗರದಲ್ಲಿ ನಿರ್ಮಿಸುತ್ತಿರುವ ರೆಡ್ಡಿ ಸಮುದಾಯ ಭವನಕ್ಕೆ ನನ್ನ ವೈಯಕ್ತಿಕವಾಗಿ ರೂ.೧೫ ಲಕ್ಷ ನೀಡುತ್ತೇನೆ. ನನ್ನ ರಾಜಕೀಯ ಬೆಳವಣಿಗೆಗೆ ಇತರೆ ಸಮಾಜಗಳಂತೆ ರೆಡ್ಡಿ ಸಮುದಾಯದವರ ಸಹಕಾರ ಇದೆ ಎಂದರು.
ಇದೇ ಸಂದರ್ಭದಲ್ಲಿ ನಗರದ ತಾಳೂರು ರಸ್ತೆಗೆ ಮಹಾಯೋಗಿ ವೇಮನರ ಹೆಸರು ನಾಮಕರಣ ಮಾಡುವ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು ಮತ್ತು ಬಳ್ಳಾರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೆಣಸಿನಕಾಯಿ ಮಾರುಕಟ್ಟೆಗೂ ಹೇಮರೆಡ್ಡಿ ಮಲ್ಲಮ್ಮನ ಹೆಸರು ಇಡಲು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ಶಾಸಕರ ಅನುದಾನದಲ್ಲಿ ರೆಡ್ಡಿ ಜನ ಸಂಘದ ಸುತ್ತುಗೋಡೆ ನಿರ್ಮಾಣಕ್ಕೆ ರೂ.೨೦ ಲಕ್ಷ ನೀಡಲಾಗಿದೆ. ಅದೇರೀತಿಯಾಗಿ ರೆಡ್ಡಿ ಜನ ಸಂಘ ಆವರಣದಲ್ಲಿ ನಿರ್ಮಿಸುವ ಕಲ್ಯಾಣ ಮಂಟಪ ನಿರ್ಮಾಣಕ್ಕೆ ವೈಯಕ್ತಿಕವಾಗಿ ರೂ.೫೦ ಲಕ್ಷ ನೀಡಲಾಗುವುದು ಎಂದು ಘೋಷಣೆ ಮಾಡಿದರು.
ರೆಡ್ಡಿ ಜನಾಂಗದವರ ಕುಲಕಸುಬು ಕೃಷಿ ಆಗಿದ್ದು, ಕಷ್ಟದಲ್ಲಿ ಸಹಾಯ ಮಾಡುವ ಗುಣವುಳ್ಳವರು. ಪ್ರಸ್ತುತ ದಿನಗಳಲ್ಲಿ ನಮ್ಮ ಸಮುದಾಯದವರು ಹಳ್ಳಿ ತ್ಯಜಿಸಿ ಪಟ್ಟಣಕ್ಕೆ ಬಂದು ಜೀವನ ಮಾಡುತ್ತಿದ್ದಾರೆ. ರೆಡ್ಡಿ ಸಮುದಾಯದ ಯುವಕರು ಹಳ್ಳಿಗಳಲ್ಲಿ ಜಮೀನು ಖರೀದಿಸಿ, ಕೃಷಿ ಚಟುವಟಿಕೆ ಕೈಗೊಂಡು ನಮ್ಮ ಕುಲ ಕಸುಬನ್ನು ಮುಂದುವರಿಸಬೇಕೆAದು ಸಮುದಾಯದ ಯುವಕರಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಸರ್ಕಾರವು ರೆಡ್ಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಮನವಿ ಮಾಡಿದರು.
ಚಳ್ಳಕೆರೆ ತಾಲೂಕಿನ ಚಿಕ್ಕಹಳ್ಳಿ ಬೇಡರೆಡ್ಡಿಹಳ್ಳಿಯ ಕನ್ನಡ ಉಪನ್ಯಾಸಕ ಭೀಮರೆಡ್ಡಿ ಎಸ್.ಬಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಜನಸಾಮಾನ್ಯರ ಕವಿಯಾದ ಯೋಗಿ ವೇಮನರು ಜಾತೀಯತೆ, ಅಂಧ ಶ್ರದ್ಧೆ, ಮೇಲು-ಕೀಳುಗಳನ್ನು ತಮ್ಮ ಕಾವ್ಯದ ಮೂಲಕ ಧಿಕ್ಕರಿಸಿದವರು ಮತ್ತು ಅಪೂರ್ವ ಸಮಾಜ ಸುಧಾರಕರು ಎಂದು ತಿಳಿಸಿದರು.
ಆಂಧ್ರಪ್ರದೇಶದ ಗುಂಟೂರ ಜಿಲ್ಲೆಯ ಕೊಂಡವೀಡು ಗ್ರಾಮದಲ್ಲಿ ಕ್ರಿ.ಶ. ೧೪೧೨ರಲ್ಲಿ ತಂದೆ ಕುಮಾರ ಗಿರಿರೆಡ್ಡಿ ಹಾಗೂ ತಾಯಿ ರಾಣಿ ಮಲ್ಲಮಾಂಬೆ ಇವರ ಮಗನಾಗಿ ಜನಿಸಿದವರು. ಮಹಾಯೋಗಿ ವೇಮನರು ಸರಳತೆಯಿಂದ ಬದುಕಿ, ಸಂತ ಜೀವನಕ್ಕೆ ಮಾದರಿ ಎನಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಲಕ್ಷ್ಮೀ ಪವನ್ ಕುಮಾರ್ ಮತ್ತು ತಂಡದಿAದ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಬಿ.ಶ್ವೇತ, ಉಪಮೇಯರ್ ಬಿ.ಜಾನಕಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸಮಾಜದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
*ಸಂಭ್ರಮದ ಮೆರವಣಿಗೆ:*
ಮಹಾಯೋಗಿ ವೇಮನ ಜಯಂತಿಯ ಅಂಗವಾಗಿ ನಗರದ ಡಾ.ರಾಜ್ಕುಮಾರ್ ರಸ್ತೆಯ ರೆಡ್ಡಿ ಜನ ಸಂಘ ಭವನದ ಆವರಣದಿಂದ ಆಯೋಜಿಸಿದ್ದ ಮೆರವಣಿಗೆಗೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳುಕುಣಿತ, ಕಂಸಾಳೆ ವಾದ್ಯ ಸೇರಿದಂತೆ ಇತರೆ ಸಾಂಸ್ಕೃತಿಕ ಕಲಾತಂಡಗಳು ಮೆರಗು ನೀಡಿದವು.
ಮೆರವಣಿಗೆಯು ರೆಡ್ಡಿ ಜನ ಸಂಘ ಭವನದ ಆವರಣದಿಂದ ಆರಂಭವಾಗಿ ಇಂದಿರಾ ವೃತ್ತದ ಮೂಲಕ ಬಿಡಿಎಎ ಫುಟ್ಬಾಲ್ ಮೈದಾನದ ವೇದಿಕೆ ಸಭಾಂಗಣಕ್ಕೆ ತಲುಪಿತು.