ರಾಜಮೌಳಿ ಜೊತೆ ಸಿನಿಮಾ ಮಾಡುವ ಹೀರೋಗಳು ಹಗಲಿರುಳು ಕಷ್ಟಪಡಲು ಸಿದ್ಧವಾಗಿರಬೇಕು. ಕಠಿಣ ನಿಯಮಗಳನ್ನು ಪಾಲಿಸಬೇಕು. ಈಗ ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ನ ಸಿನಿಮಾಗೆ ಸಕಲ ತಯಾರಿ ನಡೆಯುತ್ತಿದೆ. ತಯಾರಿಯ ಹಂತದಲ್ಲೇ ಮಹೇಶ್ ಬಾಬುಗೆ ರಾಜಮೌಳಿ ಅವರು ಒಂದಷ್ಟು ನಿಯಮಗಳನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ನಟ ಮಹೇಶ್ ಬಾಬು (Mahesh Babu) ಅವರನ್ನು ಕಂಡರೆ ಅಭಿಮಾನಿಗಳಿಗೆ ತುಂಬ ಪ್ರೀತಿ. ಅವರನ್ನು ನೇರವಾಗಿ ನೋಡಬೇಕು ಎಂಬುದು ಲಕ್ಷಾಂತರ ಮಂದಿಯ ಬಯಕೆ. ಆದರೆ ಇನ್ಮುಂದೆ ಮಹೇಶ್ ಬಾಬು ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅನುಮಾನ. ಯಾವುದೇ ಸಭೆ, ಸಮಾರಂಭಗಳಿಗೆ ಅವರು ಹಾಜರಿ ಹಾಕಬಾರದು ಎಂದು ಆದೇಶ ಹೊರಡಿಸಲಾಗಿದೆ. ಹಾಗಂತ ಇದು, ಸರ್ಕಾರದ ಆದೇಶ ಅಲ್ಲ. ಬದಲಿಗೆ, ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಹಾಕಿರುವ ನಿಯಮ. ಹೀಗೊಂದು ಸುದ್ದಿ ಟಾಲಿವುಡ್ (Tollywood) ಅಂಗಳಲ್ಲಿ ಹರಿದಾಡುತ್ತಿದೆ. ಮಹೇಶ್ ಬಾಬು ಅವರು ಇನ್ಮುಂದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು ಎಂದು ರಾಜಮೌಳಿ (SS Rajamouli) ಅವರು ಹೇಳಿದ್ದಾರೆ ಎನ್ನಲಾಗಿದೆ. ಅದಕ್ಕೆ ಒಂದು ಕಾರಣ ಕೂಡ ಇದೆ.
ಈಗಾಗಲೇ ತಿಳಿದಿರುವಂತೆ ಮಹೇಶ್ ಬಾಬು ಮತ್ತು ರಾಜಮೌಳಿ ಅವರು ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ. ಅದರ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಸಿನಿಮಾದ ಪಾತ್ರಕ್ಕಾಗಿ ಮಹೇಶ್ ಬಾಬು ಅವರು ಗೆಟಪ್ ಬದಲಿಸಿಕೊಳ್ಳಲಿದ್ದಾರೆ. ಅಲ್ಲದೇ ಅವರು ಬಾಡಿ ಬಿಲ್ಡ್ ಮಾಡಲಿದ್ದಾರೆ. ಅವರ ಹೊಸ ಗೆಟಪ್ ಹೇಗಿದೆ ಎಂಬುದು ಜನರಿಗೆ ಗೊತ್ತಾಗಬಾರದು. ಆ ಕಾರಣದಿಂದ ಮಹೇಶ್ ಬಾಬು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು ಎಂದು ರಾಜಮೌಳಿ ಸೂಚಿಸಿದ್ದಾರೆ ಎಂದು ಸುದ್ದಿ ಆಗಿದೆ.
ಬೇರೆ ನಿರ್ದೇಶಕರಿಗೆ ಹೋಲಿಸಿದರೆ ರಾಜಮೌಳಿ ಅವರು ಕೆಲಸ ಮಾಡುವ ವಿಧಾನವೇ ಬೇರೆ. ತುಂಬ ಶ್ರಮವಹಿಸಿ, ಸಾಕಷ್ಟು ಸಮಯ ತೆಗೆದುಕೊಂಡು ಅವರು ಸಿನಿಮಾ ಮಾಡುತ್ತಾರೆ. ಅದಕ್ಕೆ ತಕ್ಕಂತೆ ಹೀರೋಗಳು ಸ್ಪಂದಿಸಬೇಕು. ಮುಖ್ಯವಾಗಿ ಅವರ ಸಿನಿಮಾಗಳಲ್ಲಿ ಹೀರೋ ಗೆಟಪ್ ಬದಲಾಗುತ್ತದೆ. ಅದಕ್ಕೆ ಮಹೇಶ್ ಬಾಬು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ವಿದೇಶದ ಟ್ರೇನರ್ಗಳಿಂದ ಅವರು ತರಬೇತಿ ಪಡೆಯುತ್ತಿದ್ದಾರೆ.
ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ಹಾಗಾಗಿ ಮುಂದಿನ ಸಿನಿಮಾದಲ್ಲಿ ಅವರು ಭರ್ಜರಿ ಯಶಸ್ಸು ಪಡೆಯಬೇಕಾದ ಅನಿವಾರ್ಯತೆ ಇದೆ. ರಾಜಮೌಳಿ ಜೊತೆ ಅವರು ಕೈ ಜೋಡಿಸಿರುವುದರಿಂದ ಸಕ್ಸಸ್ ಗ್ಯಾರಂಟಿ. ಆದರೆ ಆ ಗೆಲುವು ಸುಲಭವಾಗಿ ಧಕ್ಕುವುದಿಲ್ಲ. ಅದಕ್ಕಾಗಿ ಹಗಲಿರುಳು ಕಷ್ಟಪಡಬೇಕು. ಅದೆಲ್ಲದಕ್ಕೂ ಸಿದ್ಧರಾಗಿಯೇ ಮಹೇಶ್ ಬಾಬು ಅವರು ರಾಜಮೌಳಿ ಜೊತೆ ಕೈ ಜೋಡಿಸಿದ್ದಾರೆ.
ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಮಹೇಶ್ ಬಾಬು ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾವಾಗಿ ಈ ಚಿತ್ರ ಮೂಡಿಬರಲಿದೆ. ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಈ ಬಾರಿ ರಾಜಮೌಳಿ ಅವರು ತಮ್ಮ ತಾಂತ್ರಿಕ ಬಳಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆ ಕಾರಣದಿಂದಲೂ ಸಿನಿಪ್ರಿಯರಿಗೆ ಕುತೂಹಲ ಹೆಚ್ಚಾಗಿದೆ.