ಸುವರ್ಣವಾಹಿನಿ ಸುದ್ದಿ
ಗಂಗಾವತಿ,ಜ,೧೮: ಕಾಲೇಜಿನಲ್ಲಿರುವ ಶೈಕ್ಷಣಿಕ ಸಂಪನ್ಮೂಲ ಹಾಗೂ ಸೌಕರ್ಯಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಿ ಎಂದು ಪ್ರಾಂಶುಪಾಲ ಜಾಜಿ ದೇವೇಂದ್ರಪ್ಪ ಅವರು ತಿಳಿಸಿದರು.
ನಗರದ ಶ್ರೀ ಕೊಲ್ಲಿ ನಾಗೇಶ್ವರ ರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯೂಎಸಿ) ವತಿಯಿಂದ ಪ್ರಥಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪರಿಚಯಾತ್ಮಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
೩೫೦೦ ವಿದ್ಯಾರ್ಥಿಗಳು ಇರುವ ನಮ್ಮ ಕಾಲೇಜಿನಲ್ಲಿ ೧೫ ಜನ ಪ್ರಾಧ್ಯಾಪಕರು, ೭೮ ಜನ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳಿಗೆ ಕಾಲೇಜಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆ ಮತ್ತು ಇತರೆ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಇರುವುದಿಲ್ಲ , ಹಾಗಾಗಿ ಪರಿಚಯಾತ್ಮಕ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಮತ್ತು ಇತರೆ ಅವಶ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಗುವುದು.
ಗ್ರಂಥಾಲಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಎನ್ಎಸ್ಎಸ್, ಎಸಿಸಿ ಚಟುವಟಿಕೆ ನಡೆಯುತ್ತಾರೆ. ಇದರ ಜೊತೆಗೆ ಪ್ರಾಧ್ಯಾಪಕರ ಜ್ಞಾನ ಮಾರ್ಗದರ್ಶನವನ್ನು ಪಡೆದುಕೊಂಡು ಇತರೆ ವಿದ್ಯಾರ್ಥಿಗಳು ಮಾಡಿದ ಸಾಧನೆಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಸಾಧನೆ ಮಾಡುವತ್ತ ಗಮನಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ವೈ.ಎಸ್.ವಗ್ಗಿ, ಸಹ ಸಂಯೋಜಕ ಅಕ್ಕಿ ಮಾರುತಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಜಗದೇವಿ ಕಲಶೆಟ್ಟಿ, ಶಿವಕುಮಾರ್, ಕರಿಗೂಳಿ, ಡಾ.ಶಿವರಾಜ ಗುರಿಕಾರ, ಇಟಗಿ ಶೀಬಾರಾಣಿ, ಇಮ್ಯಾನ್ಯುಯಲ್ ಸಂಜಯಾನದ್, ಮುಮ್ತಾಜ್ ಬೇಗಂ ಉಪಸ್ಥಿತರಿದ್ದರು.