ಹೊಸಪೇಟೆ (ವಿಜಯನಗರ) ಫೆಬ್ರವರಿ 02 : ಹಂಪಿ ಉತ್ಸವದ ಅಂಗವಾಗಿ ಮಾತಂಗ ಪರ್ವತ ಮೈದಾನದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಲಾದ ಸಾವಯವ ಮತ್ತು ಸಿರಿಧಾನ್ಯಗಳ ವಸ್ತು ಪ್ರದರ್ಶನವು ಸಾರ್ವಜನಿಕರ ಗಮನ ಸೆಳೆಯಿತು.
ಈ ಕಾರ್ಯಕ್ರಮಗಳಿಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯನಗರ ಶಾಸಕರಾದ ಹೆಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಸೇರಿದಂತೆ ಜನಪ್ರತಿನಿಧಿಗಳು, ಹಲವು ಗಣ್ಯರು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.
ಸಾವಯವ ಮತ್ತು ಸಿರಿಧಾನ್ಯಗಳ ವಸ್ತು ಪ್ರದರ್ಶನದಲ್ಲಿ ಪ್ರಮುಖವಾಗಿ ಅತ್ಯುತ್ತಮ ಮಳೆ ನೀರು ಕೊಯ್ಲು ಮಾಡಿ ಹಿಂದಿನ ಜನರು, ಜಾನುವಾರುಗಳಿಗೆ ಹಾಗೂ ಕೃಷಿಗೆ ಯಾವ ರೀತಿಯಲ್ಲಿ ನೀರನ್ನು ಬಳಸುತ್ತಿದ್ದರು, ಪ್ರಸ್ತುತ ಮಳೆ ನೀರು ಕೊಯ್ಲು ಮಾಡುವುದು ಜಿಲ್ಲೆಯ ಕೃಷಿಗೆ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ ಮತ್ತು ಜಮೀನುಗಳಲ್ಲಿ ನೀರಿನ ಹೊಂಡ ನಿರ್ಮಾಣ ಹಾಗೂ ಮಿಶ್ರ ಬೇಸಾಯದ ಜೊತೆಗೆ ಸಮಗ್ರ ಹಾಗೂ ಸುಸ್ಥಿರ ಕೃಷಿ ಮಾದರಿಗಳನ್ನು ಪ್ರದರ್ಶಿಸುವ ಜೊತೆಗೆ ರೈತರಿಗೆ ಕೃಷಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಮುಖ್ಯವಾಗಿ ಸಿರಿ ಧಾನ್ಯಗಳಿಂದ ನಿರ್ಮಿಸಿದ ಕನ್ನಡಾಂಬೆ ಭುವನೇಶ್ವರಿ ತಾಯಿ ಹಾಗೂ ವಿಶ್ವಗುರು ಬಸವಣ್ಣ ಅವರ ಕಲಾಕೃತಿಗಳು ಸೇರಿದಂತೆ ವಿವಿಧ ಕಲಾಕೃತಿಗಳು ಸಾರ್ವಜನಿಕರಿಗೆ ಕೈಬೀಸಿ ಕರೆಯುವಂತಿವೆ.
ಇದೆ ವೇಳೆ ಸಿರಿಧಾನ್ಯಗಳ ಪಾಕ ಸ್ಪರ್ಧೆಗೂ ಚಾಲನೆ ದೊರೆಯಿತು.