ಬಳ್ಳಾರಿ,ಫೆ.16 : ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ. ಸವಿತಾ ಸಮಾಜವು ಎಲ್ಲ ವರ್ಗದ ಜನರಿಗೂ ತಾರತಮ್ಯವಿಲ್ಲದೆ ಸೇವೆ ನೀಡುತ್ತಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಈ ಸಮುದಾಯ ಮತ್ತಷ್ಟು ಸದೃಢವಾಗಬೇಕಿದೆ ಎಂದು ಮಹಾನಗರ ಪಾಲಿಕೆಯ ಮಹಾ ಪೌರರಾದ ಬಿ.ಶ್ವೇತ ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಡಿಮೆ ಜನಸಂಖ್ಯೆ ಹೊಂದಿರುವ ಸವಿತಾ ಸಮಾಜದವರು ಸಂಘಟಿತರಾದರೆ ಮಾತ್ರ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯ. ಪ್ರತಿಯೊಬ್ಬರೂ ತಾನು ಮಾಡುವ ಕಸುಬಿನ ಮೇಲೆ ಗೌರವ, ನಿಷ್ಠೆ ಇಟ್ಟುಕೊಂಡಾಗ ಬದುಕಿನಲ್ಲಿ ಉತ್ತುಂಗಕ್ಕೇರಲು ಸಾಧ್ಯವಿದೆ. ಸವಿತಾ ಮಹರ್ಷಿ ಅವರ ಹಾದಿಯಲ್ಲಿ ಸಾಗಿ ಆಚಾರ-ವಿಚಾರ ಮೈಗೂಡಿಸಿಕೊಂಡರೆ ಸಮಾಜದಲ್ಲಿ ಸತ್ಪ್ರಜೆಗಳಾಗಬಹುದು ಎಂದು ತಿಳಿಸಿದರು.
ಮಹನೀಯರ ಜಯಂತಿಗಳನ್ನು ಆಚರಿಸುವ ಮೂಲಕ ಸರ್ಕಾರವು ಅವರ ಆದರ್ಶಗಳ ಹಾದಿಯಲ್ಲಿ ನಡೆಯಲು ನಮಗೆ ಬೆಳಕು ತೋರಿಸಿದೆ. ಸವಿತಾ ಸಮಾಜದ ಬಂಧುಗಳು ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಪೌರಾಣಿಕ ವ್ಯಕ್ತಿಯಾದ ಸವಿತಾ ಮಹರ್ಷಿಯು ರಥಸಮ್ತಿಯ ದಿನ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದವರು. ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ ಬಲಗಣ್ಣನ್ನು ಸೂರ್ಯನಿಗೆ ಹೋಲಿಸಲಾಗುತ್ತದೆ. ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ಪ್ರತಿತಿಯಿದೆ. ಸವಿತಾ ಸಮಾಜದವರನ್ನು ಸೂರ್ಯ ವಂಶಕ್ಕೆ ಸೇರಿದವರೆಂದು ಹೇಳಬಹುದು ಎಂದರು.
ಕಾರ್ಯಕ್ರಮದಲ್ಲಿ ಕೆ.ಕಲ್ಯಾಣಿ ತಂಡದವರು ವಚನ ಗಾಯನ ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಮೇಯರ್ ಬಿ.ಜಾನಕಿ, ಮಾಜಿ ಮೇಯರ್ ಹಾಗೂ ಪಾಲಿಕೆಯ ಸದಸ್ಯೆ ಎಂ.ರಾಜೇಶ್ವರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಜಿಲ್ಲಾ ಸವಿತಾ ಸಮಾಜ ಸಂಘದ ಅಧ್ಯಕ್ಷ ಸಣ್ಣಗೊಂಡ್ಲ ರಾಕೇಶ್ ಸೇರಿದಂತೆ ಸಮಾಜದ ಮುಖಂಡರು, ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಂಭ್ರಮದ ಮೆರವಣಿಗೆ:
ಸವಿತಾ ಮಹರ್ಷಿ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ಸಂಭ್ರಮದಿಂದ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕøತಿಕ ಕಲಾತಂಡಗಳು ಭಾಗವಹಿಸಿ ಮೆರಗು ನೀಡಿದವು.
ಮಹಾನಗರ ಪಾಲಿಕೆಯ ಮೇಯರ್ ಬಿ.ಶ್ವೇತ ಅವರು ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ಹೊಸ ಜಿಲ್ಲಾಡಳಿತ ಭವನದಿಂದ ಆರಂಭವಾಗಿ ಇಂದಿರಾ ವೃತ್ತ, ಕೆ.ಸಿ.ರಸ್ತೆ, ಮೀನಾಕ್ಷಿ ವೃತ್ತ, ಹಳೇ ತಾಲ್ಲೂಕು ಕಚೇರಿ, ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಬಿಡಿಎಎ ಫುಟ್ಬಾಲ್ ಮೈದಾನದ ವೇದಿಕೆ ಸಭಾಂಗಣಕ್ಕೆ ಅಂತ್ಯಗೊಂಡಿತು.