ಬಳ್ಳಾರಿ,ಫೆ.24 : ಜಿಲ್ಲೆಯಲ್ಲಿನ ಅಲೆಮಾರಿ ಜನಾಂಗದವರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಇತರೆ ಚಟುವಟಿಕೆಳಿಗಾಗಿ 5 ಕೋಟಿ ರೂ.ವೆಚ್ಚದಲ್ಲಿ ಸರ್ಕಾರದಿಂದ ಅಲೆಮಾರಿ ಭವನ ನಿರ್ಮಿಸಿಕೊಡುವುದಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಭರವಸೆ ನೀಡಿದರು.
ವಾಲ್ಮೀಕಿ ಭವನದಲ್ಲಿ ಕರ್ನಾಟಕ ರಾಜ್ಯ ಎಸ್.ಸಿ., ಎಸ್.ಟಿ., ಅಲೆಮಾರಿ ಬುಡಕಟ್ಟು ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ `ಅಲೆಮಾರಿ ಜಾಗೃತಿ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, 1 ಎಕರೆ ಸರ್ಕಾರಿ ಸ್ಥಳದಲ್ಲಿ ಭವನ ನಿರ್ಮಿಸುವುದಾಗಿ ಹೇಳಿದರು. ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಎಲ್ಲೆಲ್ಲಿ ಸರ್ಕಾರದ ಜಾಗ ಇರುತ್ತೋ ಅಲ್ಲಲ್ಲಿ ಗುರುತಿಸಿ ನಿವೇಶ ಒದಗಿಸುವುದಾಗಿ ಹೇಳಿದರು. ವಸತಿ ಇದ್ದು, ಮನೆ ಕಟ್ಟಲು ಸಾಧ್ಯವಾಗದೇ ಇರುವವರಿಗೆ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿದರು. ಸಂವಿದಾನಶಿಲ್ಪಿ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಸರ್ಕಾರದಿಂದ ಅಲೆಮಾರಿಗಳಿಗೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುತ್ತೇನೆ. ಯಾವುದೇ ಸಂದರ್ಭದಲ್ಲಿ ನಿಮ್ಮ ಜೊತೆಗೆ ಇದ್ದು, ನಿಮ್ಮೆಲ್ಲರ ಸಬಲೀಕರಣಕ್ಕಾಗಿ ಶ್ರಮಿಸುತ್ತೇನೆ ಎಂದರು.
ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಅಲೆಮಾರಿಗಳ ಪರಂಪರೆ ಮುಂದುವರಿಸಿಕೊಂಡು ಹೋಗುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳು ಏನೇ ಇದ್ದರೂ ಅದನ್ನು ಶಾಸಕನಾಗಿ ನಿಮಗೆ ಪೂರೈಸಿಕೊಡುತ್ತೇನೆ ಎಂದರು.
ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಅಲೆಮಾರಿಗಳೊಂದಿಗೆ ನಾನು ಇರುತ್ತೇನೆ. ಗುಡಾರ ನಗರದಲ್ಲಿರುವ ಎಲ್ಲರಿಗೂ ಮನೆಗಳನ್ನು ನಿರ್ಮಾಣ ಮಾಡಿಕೊಡುತ್ತೇನೆ ಎಂದು ಹೇಳಿದರು.
ಕರ್ನಾಟಕ ಎಸ್.ಸಿ., ಎಸ್.ಟಿ., ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಲೆಮಾರಿಗಳು ಜಾಗೃತರಾಗಬೇಕು. ಶಿಕ್ಷಣವಂತರಾಗಬೇಕು. ಎಲ್ಲರೂ ಒಗ್ಗೂಡಿ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರಗಳ ಕಣ್ಣು ತೆರೆಸಬೇಕು. ಅಲೆಮಾರಿಗಳಿಗೆ ನಿವೇಶನ, ವಸತಿ ಸೌಕರ್ಯದ ಜೊತೆಗೆ ಉದ್ಯೋಗದಲ್ಲಿ ಮೀಸಲಾತಿ ಒದಗಿಸಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಮಾಜಿ ಸಂಸದ ವಿಎಸ್ ಉಗ್ರಪ್ಪ, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಶ್ವೇತಾ ಸೋಮು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ, ಅಲೆಮಾರಿ, ಅರೆ ಅಲೆಮಾರಿ ಸಮುದಾಯ ಸಮಿತಿಯ ರಾಜ್ಯಾಧ್ಯಕ್ಷ ಶೇಷಪ್ಪ, ಕರ್ನಾಟಕ ರಾಜ್ಯ ಎಸ್.ಸಿ., ಎಸ್.ಟಿ., ಬುಡಕಟ್ಟು ಮಹಾಸಭಾದ ರಾಜ್ಯಾಧ್ಯಕ್ಷ ಕೆ.ವೀರೇಶ್, ಅಲೆಮಾರಿ ಸಮುದಾಯಗಳ ಮುಖಂಡರಾದ ರಾಮಾಂಜಿನಿ, ಸೇರಿದಂತೆ ಅನೇಕರು ಇದ್ದರು.