ದಾವಣಗೆರೆ (ಫೆ.04): ಸಾಮಾಜಿಕ ಜಾಲತಾಣದಲ್ಲಿ ನೈತಿಕತೆ ಉಳಿಸಿಕೊಂಡು ಹೋಗುವುದು ಪತ್ರಕರ್ತರ ಜವಾಬ್ದಾರಿ. ಸುಳ್ಳು ಸುದ್ದಿ ಹರಡಿರುವ ಸಾಕಷ್ಟು ಉದಾಹರಣೆ ಇದೆ. ಇದರ ಬಗ್ಗೆ ಪತ್ರಕರ್ತರು ಎಚ್ಚರಿಕೆ ವಹಿಸಬೇಕು ಎಂದು ಗಣಿ, ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಲಹೆ ನೀಡಿದರು. ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದ ಹರ್ಡೆಕರ್ ಮಂಜಪ್ಪನವರ ವೇದಿಕೆಯಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆಯುತ್ತಿರುವ ರಾಜ್ಯಮಟ್ಟದ 38ನೇ ಸಮ್ಮೇಳನದಲ್ಲಿ ಮಾತನಾಡಿ ಭಾಷೆ, ಜ್ಞಾನ, ಸಾಮಾಜಿಕ ಕಾಳಜಿ, ಧಾರ್ಮಿಕ, ಇತಿಹಾಸ, ಪರಂಪರೆ ಸಾಂಸ್ಕೃತಿಕತೆ ಮೈಗೂಡಿಸಿಕೊಳ್ಳಬೇಕು.
ಪತ್ರಕರ್ತರು, ಮಾಧ್ಯಮಗಳು ಸಾರ್ವಜನಿಕರಿಗೆ ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯ ದುರುಪಯೋಗ ಆಗದಂತೆ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಬೀದರ್, ಕಲ್ಬುರ್ಗಿಯಿಂದ ಚಾಮರಾಜನಗರದವರೆಗೆ ಎಲ್ಲ ಪತ್ರಕರ್ತರು ಬಂದಿರುವುದು ಸಂತೋಷ. ಸುದ್ದಿಮನೆ ಧಾವಂತದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ, ಅನೇಕರಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿದೆ. ಹಲವರ ಕಳೆದುಕೊಂಡಿದ್ದೇವೆ. 108ಕ್ಕೂ ಹೆಚ್ಚು ಪತ್ರಕರ್ತರು ಕೋವಿಡ್ ಸಂದರ್ಭದಲ್ಲಿ ಸಾವನ್ನಪ್ಪಿದರು. ಆ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರು ತಾಯ್ತನದ ಗುಣದಿಂದ ಸಾಕಷ್ಟು ಸಹಾಯಹಸ್ತ ಚಾಚಿದರು.
ಪ್ರಭಾಕರ್ ಅವರು ಪತ್ರಕರ್ತರ ಪರವಾಗಿ ನಿಂತು ನಮಗೆ ಸಿಎಂ ಅವರನ್ನು ಭೇಟಿ ಮಾಡಿಸಿ, ಸಹಾಯ ಮಾಡಿದರು ಎಂದರು. ಸುದ್ದಿಮನೆಯಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಸವಾಲುಗಳು ಬರುತ್ತಿವೆ. ಸದುದ್ದೇಶದಿಂದ ಪವಿತ್ರ ವ್ರತದಂತೆ ಭಾವಿಸುವವರು ಈ ರಂಗಕ್ಕೆ ಬರಬೇಕೆ ಹೊರತು, ದಂಧೆಯೆಂದು ಭಾವಿಸಿಕೊಂಡು ಬರಬಾರದು, ನೈಜ ಪತ್ರಕರ್ತರ ಉಳಿಸಿಕೊಳ್ಳುವ ಸವಾಲು ನಮ್ಮ ಮುಂದಿದೆ. ಈ ದೃಷ್ಟಿಯಲ್ಲಿ ಇದು ಮಹತ್ವದ ಸಮ್ಮೇಳನ ಎಂದು ಹೇಳಿದರು. ಬಡಪತ್ರಕರ್ತರು ಅನಾರೋಗ್ಯ ಸಮಸ್ಯೆ ಉಂಟಾದಾಗ ಅವರಿಗೆ ಆಸ್ಪತ್ರೆಗೆ ಹಣ ನೀಡಲು ಪರದಾಡುತ್ತಿದ್ದಾರೆ.
ಹಾಗಾಗಿ, ಅವರಿಗೆ ಆರೋಗ್ಯ ಸಂಜೀವಿನಿಯಂತಹ ಸೌಲಭ್ಯ ನೀಡಬೇಕು. ಜಾಹೀರಾತು ಕಾರಣಕ್ಕೆ ಪ್ರಾದೇಶಿಕ ಮತ್ತು ಜಿಲ್ಲಾಮಟ್ಟದ ಪತ್ರಿಕೆಗಳು ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಅವರಿಗೆ ಜಾಹೀರಾತು ನೀಡಬೇಕು. ಎಸ್ಸೆಸ್ಸ್ ಅವರು ₹5 ಕೋಟಿ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟಿದ್ದು ಪ್ರಶಂಸನೀಯ ಎಂದರು. ಪತ್ರಿಕಾ ವಿತರಕರಿಗೆ ಅನುಕೂಲ ಮಾಡಿಕೊಟ್ಟಿರುವುದು ಸಿದ್ಧರಾಮಯ್ಯ. ಪತ್ರಿಕಾ ವಿತರಕರಿಗೆ ಅಪಘಾತವಾದಾಗ ಕನಿಷ್ಠ ₹1 ಲಕ್ಷ ಹಣ ಸಿಗುತ್ತಿದೆ. ಸಾವು ಸಂಭವಿಸಿದರೆ ₹2 ಲಕ್ಷ ಹಣ ಸಿಗುತ್ತದೆ. ಬೆಂಗಳೂರಿನಲ್ಲಿ ಪತ್ರಕರ್ತರ ಭವನ ನಿರ್ಮಿಸಿಕೊಡಬೇಕು ಎಂದು ಹೇಳಿದರು.