ವಿಜಯಪುರ: ಬೇಸಿಗೆ ಆರಂಭದಲ್ಲೇ ವಿಜಯಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ನಗರದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸೂಕ್ತ ಯೋಜನೆ ರೂಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭಾನುವಾರ ನಗರಕ್ಕೆ ಕುಡಿಯುವ ನೀರು ಪೂರೈಸುವ ಕೃಷ್ಣಾ ನದಿಯಿಂದ ಭೂತನಾಳ ಕೆರೆ ತುಂಬಿಸುವ ತಿಡಗುಂದಿ ಅಕ್ವಾಡೆಕ್ಟ್ ಸ್ಥಳ ಪರಿಶೀಲನೆ ನಡೆಸಿ, ನೀರು ಹರಿಯುವ ಪ್ರಮಾಣ, ಅಕ್ವಾಡೆಕ್ಟ್ ನಿಂದ ನೀರು ಎತ್ತುವ ಪಂಪ್ ಗಳು, ವಿದ್ಯುತ್ ಪರಿಕರಗಳ ಸಾಮರ್ಥ್ಯ ಸೇರಿದಂತೆ ಇತರೆ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೇ, ನಗರಕ್ಕೆ ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಅಗತ್ಯ ಇರುವ ಎಲ್ಲ ವ್ಯವಸ್ಥೆಗಳನ್ನು ನಿರ್ಲಕ್ಷ್ಯ ತೋರದಂತೆ ತ್ವರಿತವಾಗಿ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತಿಡಗುಂದಿ ಅಕ್ವಡೆಕ್ಟ್ನಿಂದ ಭೂತನಾಳದ ಕೆರೆ ನೀರು ತುಂಬಿಸಲಾಗುತ್ತಿದ್ದು, ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಹೆಚ್ಚುವರಿ ಪಂಪ್ಗಳನ್ನು ಅಳವಡಿಸಲಾಗುತ್ತಿದೆ. ಭೂತನಾಳ ಕೆರೆಗೆ ಪೂರಕವಾಗಿ ಅರಕೇರಿ ಶಾಖಾ ಕಾಲುವೆ ಮೂಲಕ ನೀರು ಹರಿಸುವುದು ಸೇರಿದಂತೆ ಪರ್ಯಾಯ ಮಾರ್ಗಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಟ್ಯಾಂಕ್ನಿಂದ ನೀರು ವಿತರಿಸಲು ಅನುಕೂಲವಾಗುವಂತೆ ಪಂಪ್ಹೌಸ್ಗೆ ಚಾಲನೆ ನೀಡಲಾಗಿದ್ದು, ನೀರಿನ ಮಟ್ಟದಲ್ಲಿನ ನಿರೀಕ್ಷಿತ ಹೆಚ್ಚಳಕ್ಕೆ ಅನುಗುಣವಾಗಿ ಮತ್ತೊಂದು ಪಂಪ್ ಅನ್ನು ಜೋಡಿಸಲು ಯೋಜನೆ ರೂಪಿಸಲಾಗಿದೆ. ತೆರೆದ ಬಾವಿಗಳಿಗೆ ಕಾಯಕಲ್ಪ ಮತ್ತು ನಿರ್ವಹಣೆಯ ಪ್ರಯತ್ನಗಳೂ ಕೂಡ ನಡೆಯುತ್ತಿವೆ, ಬಾವಿ ನೀರನ್ನು ಗೃಹಬಳಕೆಯ ಉದ್ದೇಶಗಳಿಗೆ ಬಳಸಿಕೊಳ್ಳುವತ್ತ ಗಮನ ಹರಿಸಲಾಗಿದೆ. ಬೇಸಿಗೆಯ ವೇಳೆ ನಿವಾಸಿಗಳಿಗೆ ಸ್ಥಿರವಾದ ನೀರು ಸರಬರಾಜು ಮಾಡಲು ಬಾವಿಗಳಲ್ಲಿ ಪಂಪ್ ಸೆಟ್ಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಬಸವನ ಬಾಗೇವಾಡಿ ವೃತ್ತದ ಕೆಬಿಜೆಎನ್ಎಲ್ ಸೂಪರಿಂಟೆಂಡೆಂಟ್ ಎಂಜಿನಿಯರ್ ಗೋವಿಂದ ರಾಠೋಡ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.