ಬಳ್ಳಾರಿ, ಏ.29: ಬಳ್ಳಾರಿ ಜಿಲ್ಲೆಗೆ ಜಿಂದಾಲ್ ಸ್ಟೀಲ್ ಫ್ಯಾಕ್ಟರಿ, ಬಿಟಿಪಿಎಸ್ ತಂದ ಶ್ರೇಯಸ್ಸು ಕಾಂಗ್ರೆಸ್ ಪಕ್ಷದ್ದು, ಆದರೆ ಬಿಜೆಪಿಯವರ ಸಾಧನೆ ಶೂನ್ಯ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ 3ನೇ ವಾರ್ಡಿನ ಬಂಡಿಮೋಟ್ ಬಳಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರ ಪರ ಮತ ಯಾಚಿಸಿ ಮಾತನಾಡಿದರು.
ಬಿಜೆಪಿಯವರು ಬಳ್ಳಾರಿಗೆ ನಾಲ್ಕು ಸಲ ಸಂಸದರಾಗಿದ್ದರು, ನಗರಕ್ಕೆ ಶಾಸಕರಾಗಿದ್ದರು, ಆದರೆ ಅವರು ಏನೂ ಕೆಲಸ ಮಾಡಲಿಲ್ಲ. ಅವರು ಮತ ಕೇಳಲು ಬಂದಾಗ ನೀವು ಅವರನ್ನು ಪ್ರಶ್ನೆ ಮಾಡಬೇಕು ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಗೆ ಜಿಂದಾಲ್ ಫ್ಯಾಕ್ಟರಿ ತಂದದ್ದು ದಿ.ಪ್ರಧಾನಿ ಇಂದಿರಾ ಗಾಂಧಿ, ರಾಜ್ಯಕ್ಕೆ ವಿದ್ಯುತ್ ಪೂರೈಸುವ ಬಿಟಿಪಿಎಸ್ ಸ್ಥಾಪಿಸಿದ್ದು ಸೋನಿಯಾ ಗಾಂಧಿಯವರು, ಆ ಎರಡು ಸಂಸ್ಥೆಗಳಿಂದಾಗಿ ನಮ್ಮ ಜಿಲ್ಲೆಯ ಸಾವಿರಾರು ಯುವಕರಿಗೆ ಉದ್ಯೋಗ ಸಿಕ್ಕಿದೆ ಎಂದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಕೀಳಾಗಿ ಮಾತನಾಡುತ್ತಾರೆ. ಬಿಟ್ಟಿ ಭಾಗ್ಯ ಎಂದು ಕರೆಯುತ್ತಾರೆ ಎಂದು ಹೇಳಿದ ಅವರು, ಬಡವರನ್ನು ಅವಮಾನಿಸುವ ಈ ಬಿಜೆಪಿಯವರನ್ನು ಮತದಾರರು ಸೋಲಿಸಬೇಕು ಎಂದರು.
ಬಳ್ಳಾರಿ ನಗರದ ಗ್ರಾಮದೇವತೆ ಕನಕ ದುರ್ಗಮ್ಮ ದೇವಸ್ಥಾನದ ಅಭಿವೃದ್ಧಿ ಮಾಡಿದ್ದೇವೆ. ನಗರದ 12 ಮಸೀದಿಗಳಿಗೆ ಒಂದೂವರೆ ಕೋಟಿ ರೂ. ಅನುದಾನ ತರಲಾಗಿದೆ. ಬಡ ಮುಸ್ಲಿಂ ಯುವತಿಯರ ಮದುವೆಗೆ ಅನುಕೂಲ ಆಗಲಿ ಎಂದು ವಡ್ಡರಬಂಡಾ ಪ್ರದೇಶಕ್ಕೆ 5 ಕೋಟಿ ರೂ. ಅನುದಾನದಲ್ಲಿ ಶಾದಿ ಮಹಲ್ ನಿರ್ಮಿಸಲು ಕ್ರಮ ಕೈಗೊಂಡಿರುವೆ, ಈವರೆಗೆ ಬಳ್ಳಾರಿ ನಗರಕ್ಕೆ 120 ಕೋಟಿ ರೂ. ಅನುದಾನ ತಂದಿರುವೆ ಎಂದು ಹೇಳಿದರು.
ಎಲ್ಲರೂ ಚುನಾವಣೆಗೆ ಐದು ತಿಂಗಳಿದ್ದಾಗ ಪಟ್ಟಾ ಹಂಚುತ್ತಾರೆ, ಆದರೆ ನಾನು ಸಮಯ ಇದ್ದರೂ ಕೂಡ ಲೋಕಸಭಾ ಚುನಾವಣೆ ನಂತರ ತಕ್ಷಣವೇ ಪಟ್ಟಾ ಹಂಚುವೆ, ಚುನಾವಣೆ ಮೊದಲು ಹಂಚಿದ್ದರೆ ಲಾಭ ಆಗುತ್ತಿತ್ತು ಎಂದು ಬಿಜೆಪಿಯವರು ಹೇಳಿದರು, ಆದರೆ ಪಟ್ಟಾ ಹಂಚದೇನೇ ಜನರ ಮತ ಗಳಿಸುವ ವಿಶ್ವಾಸ ನನಗಿದೆ, ನನ್ನ ಮತದಾರರು ನನ್ನ ಕೈ ಹಿಡಿಯುತ್ತಾರೆ ಎಂದರು.
ಇದೇ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಎಂ.ಪ್ರಭಂಜನಕುಮಾರ್; ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಈ.ತುಕಾರಾಂ ಅವರಿಗೆ ಮತ ನೀಡುವ ಮೂಲಕ ನಮ್ಮ ಕೈ ಬಲಪಡಿಸಬೇಕು. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದರೆ ಒಟ್ಟು 25 ಗ್ಯಾರಂಟಿಗಳನ್ನು ನಮ್ಮ ಪಕ್ಷ ಈಡೇರಿಸಲಿದೆ, ಈ ಮೂಲಕ ಪ್ರತಿ ಮನೆ ಯಜಮಾನಿಗೆ ವಾರ್ಷಿಕ 1 ಲಕ್ಷ ರೂ. ಕೊಡಲಾಗುವುದು ಎಂದರು.
ಪಾಲಿಕೆಯ 3ನೇ ವಾರ್ಡಿನ ಸದಸ್ಯ ಎಂ.ಪ್ರಭಂಜನಕುಮಾರ್, ಮಾಜಿ ಸದಸ್ಯ ವಿವೇಕ್ ಮುಂಡ್ಲೂರು, ವಿಷ್ಣು ಬೋಯಪಾಟಿ, ಪಾಲಿಕೆ ಸದಸ್ಯರಾದ ಮಿಂಚು ಶ್ರೀನಿವಾಸುಲು, ರಾಜೇಶ್ವರಿ ಸುಬ್ಬರಾಯುಡು, ಶೋಭಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಸೇನ್ ಪೀರಾಂ, ಮುಖಂಡ ಬಿಆರೆಲ್ ಶ್ರೀನಿವಾಸ್ ಮೊದಲಾದವರು ಹಾಜರಿದ್ದರು.