ಬಳ್ಳಾರಿ, ಏ.25: ವಿಧಾನಸಭೆ ಚುನಾವಣೆ ವೇಳೆ ಅವರನ್ನು ನಾನು ಸೋಲಿಸ್ತೀನಿ, ನನ್ನ ಅವರು ಸೋಲಿಸುತ್ತಾರೆ ಎಂದು ಹೇಳಿ ನಾಟಕ ಮಾಡಿದವರು ಇಂದು ಒಂದಾಗಿದ್ದಾರೆ, ಯಾರೇ ಒಂದಾಗಲಿ ನನಗೆ ಭಯ ಇಲ್ಲ, ನಾನು ಜನರನ್ನು ನಂಬಿ ಚುನಾವಣೆ ಮಾಡಿದೆ, ಜನರು ನನ್ನ ಹಿಂದೆ ಇದ್ದಾರೆ, ಜನರ ಆಶೀರ್ವಾದದಿಂದ ಗೆದ್ದು ಶಾಸಕನಾಗಿರುವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಅವರ ಪರ 11ನೇ ವಾರ್ಡಿನ ಕಮ್ಮಿಂಗ್ ರಸ್ತೆ ಬಳಿ ಮತ ಯಾಚಿಸಿ ಮಾತನಾಡಿದರು.
ಇದು ಧರ್ಮ ಅಧರ್ಮಗಳ ನಡುವೆ ನಡೆಯುತ್ತಿರುವ ಯುದ್ಧ, ಈ ಯುದ್ಧವನ್ನು ಖಡ್ಗದಿಂದ ಅಲ್ಲ ಮತಗಳಿಂದ
ನಡೆಸುವ ಯುದ್ಧವಾಗಿದೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಯ ವೇಳೆ ಐದು ಗ್ಯಾರಂಟಿಗಳನ್ನು ಕೊಡುವುದಾಗಿ ಭರವಸೆ ನೀಡಿದ್ದೆವು, ಅದರ ಪ್ರಕಾರ ನಾವು ಭರವಸೆ ಈಡೇರಿಸಿದ್ದೇವೆ. ನಾವು ಬಡವರಿಗೆ ಅಕ್ಕಿ ಕೊಡಬಾರದು ಅಂತ ಬಿಜೆಪಿಯವರು ಅಡ್ಡ ಬಿದ್ದರು, ಆದರೆ ಅಕ್ಕಿ ಕೊಡದಿದ್ದರೂ ಕೂಡ ದರ ಬದಲಿಗೆ ಹಣ ನೀಡಿದ್ದೇವೆ ಎಂದು ಶಾಸಕ ಭರತ್ ರೆಡ್ಡಿ ಹೇಳಿದರು.
ನಾನು ಚುನಾವಣೆ ನಂತರ ನಗರ ವಿಧಾನಸಭಾ ಕ್ಷೇತ್ರಕ್ಕೆ 200 ಕೋಟಿ ರೂ. ಅನುದಾನ ತಂದಿರುವೆ, ವೈಯಕ್ತಿಕವಾಗಿ ಸಾಕಷ್ಟು ಕೆಲಸ ಮಾಡಿರುವೆ, ನೀವು ನನ್ನ ಬಳಿ ಬಂದಾಗ ನಿಮ್ಮ ಸಮಸ್ಯೆಗೆ ಪರಿಹಾರ ನೀಡಿರುವೆ, ಹೀಗಾಗಿ ನಮ್ಮ ಪಕ್ಷವನ್ನು ಬೆಂಬಲಿಸಿ ಎಂದರು.
ಬಿಜೆಪಿ ಅಭ್ಯರ್ಥಿ ಈ ಹಿಂದೆ ಸಂಸದರಾಗಿದ್ದಾಗ ಅವರು ಏನೂ ಕೆಲಸ ಮಾಡಿಲ್ಲ ಎಂದು ಹೇಳಿದ ಭರತ್ ರೆಡ್ಡಿ, 15 ವರ್ಷಗಳಿಂದ ಬಳ್ಳಾರಿಗೆ ಬಿಜೆಪಿ ಸಂಸದರೆ ಇದ್ದಾರೆ, ಬಿಜೆಪಿ ಸಂಸದರು ಮಾಡಿದ ಅಭಿವೃದ್ಧಿ ಶೂನ್ಯ ಎಂದರು.
ಡಿಸಿಸಿ ನೂತನ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಮಾತನಾಡಿ; ನಮ್ಮ ಸಿಎಂ ಸಿದ್ದರಾಮಯ್ಯ ಅವರು ಬಡವರಿಗೆ ಗ್ಯಾರಂಟಿ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ ಅಂದಾಜು ಎಂಟು ಸಾವಿರ ರೂ. ನಷ್ಟು ಅನುಕೂಲ ಆಗಿದೆ. ಮಹಾಲಕ್ಷ್ಮೀ ಯೋಜನೆ ಮೂಲಕ ಕುಟುಂಬದ ಒಬ್ಬ ಮಹಿಳೆಗೆ ಒಂದು ಲಕ್ಷ ರೂ. ಸಿಗಲಿದೆ. ಯುವಕರಿಗೆ ಒಂದು ಲಕ್ಷ ದನಸಹಾಯ ಸಿಗಲಿದೆ. ಯುವಜನರು ವಾಟ್ಸಪ್ ನಲ್ಲಿ ಮೋದಿ ಸುಳ್ಳು ನಂಬಿ ಮರುಳಾಗಬಾರದು ಎಂದರು.
ಬಿಜೆಪಿಯವರು ಏನು ಕೊಟ್ಟಿದ್ದಾರೆ? ಅವರಿಂದ ನಿಮಗೆ ಏನು ಅನುಕೂಲ ಆಗಿದೆ ಎಂದು ನೀವಾದರೂ ಹೇಳಿ ಎಂದ ಅಲ್ಲಂ ಪ್ರಶಾಂತ್, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡ್ತೀವಿ ಅಂದ್ರು, ಕೊಡಲಿಲ್ಲ. ಬಿಜೆಪಿಯವರು ಅವರು ಕೆಲಸ ಕಾರ್ಯದ ಆಧಾರದ ಮೇಲೆ ಮತ ಕೇಳುವುದಿಲ್ಲ, ಜಾತಿ, ಧರ್ಮದ ಹೆಸರಿನಲ್ಲಿ ವಿವಾದ ಸೃಷ್ಟಿಸಿ ಮತ ಕೇಳುತ್ತಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಮಹಾನಗರ ಪಾಲಿಕೆಯ ಸದಸ್ಯ ಮುಲ್ಲಂಗಿ ನಂದೀಶ್; ಪಾಲಿಕೆಯ ಚುನಾವಣೆಯಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ ಹಾಗೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ತುಕಾರಾಂ ಅವರನ್ನು ಗೆಲ್ಲಿಸಬೇಕೆಂದು ಮಹಾನಗರ ಪಾಲಿಕೆಯ ಸದಸ್ಯ ಮುಲ್ಲಂಗಿ ನಂದೀಶ್ ಅವರು ಮಾತನಾಡಿದರು.
ಡಿಸಿಸಿ ಕಾರ್ಯಾಧ್ಯಕ್ಷ ವಿಷ್ಣು ಬೋಯಪಾಟಿ, ಪಾಲಿಕೆಯ ಸದಸ್ಯರಾದ ಮಿಂಚು ಶ್ರೀನಿವಾಸುಲು, ನೂರ್ ಮೊಹಮ್ಮದ್, ಮುಖಂಡರಾದ ಬಿಆರೆಲ್ ಸೀನಾ, ಲೋಕೇಶ್, ಸಿಲಾರ್, ಶೋಭಾ, ಚಂಪಾ ಚವ್ಹಾಣ ಮೊದಲಾದವರು ಹಾಜರಿದ್ದರು.