ಬಳ್ಳಾರಿ, ಫೆ.05: ಡಿಎಂಎಫ್ ಅನುದಾನದಲ್ಲಿ ನಗರ ವಿಧಾನಸಭಾ ಕ್ಷೇತ್ರದ 220 ಅಂಗನವಾಡಿಗಳಿಗೆ ರೆಫ್ರಿಜರೇಟರ್ ನೀಡಲಾಗುತ್ತಿದೆ, ಇದು ಇಡೀ ರಾಜ್ಯದಲ್ಲಿ ಸಂಡೂರು ಹೊರತುಪಡಿಸಿದರೆ ಬಳ್ಳಾರಿ ನಗರದಲ್ಲಿ ಮಾತ್ರ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ 35ನೇ ವಾರ್ಡಿನ ಇಂದಿರಾ ನಗರದ ಸರ್ಕಾರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ಹಾಗೂ 220 ಅಂಗನವಾಡಿ ಕೇಂದ್ರಗಳಿಗೆ ರೆಫ್ರಿಜರೇಟರ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಅಂಗನವಾಡಿ ಮಕ್ಕಳಿಗೆ ಉತ್ತಮ ಕಲಿಕೆಯ ಜೊತೆಗೆ ಉತ್ತಮ ಆಹಾರ ನೀಡಬೇಕು, ಹಾಗಾದಾಗ ಮಾತ್ರ ಶಿಕ್ಷಣ ನೀಡುವ ಮೂಲ ಆಶಯ ಈಡೇರುತ್ತದೆ ಎಂದರು.
24 ಹೊಸ ಅಂಗನವಾಡಿಗಳನ್ನು ನಿರ್ಮಿಸಲಾಗುವುದು, ಇಡೀ ಬಳ್ಳಾರಿ ನಗರ ಕ್ಷೇತ್ರದಲ್ಲಿ ಅತ್ಯಾಧುನಿಕ ಮಾದರಿಯ ಅಂಗನವಾಡಿಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದ ಅವರು, ಖಾಸಗಿ ಪ್ಲೇ ಸ್ಕೂಲ್ ಗಳ ಹಾಗೆ ಅಂಗನವಾಡಿಗಳ ನಿರ್ಮಾಣ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಮಕ್ಕಳ ಪಾಲನೆ ಪೋಷಣೆ ಕಷ್ಟದ ಕೆಲಸ, ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ, ಒಂದೊಂದು ಮಗುವನ್ನೂ ತಾವು ಜ್ಯೋತಿಯ ಹಾಗೆ ದೇಶಕ್ಕೆ ಬೆಳೆಸುವಂಥವರು ನಿಮಗೆ ಕಾರ್ಯಕರ್ತೆಯರು, ಶಿಕ್ಷಕಿ ಎನ್ನುವ ಬದಲು ಮಾತೋಶ್ರೀ ಎಂಬ ಹೆಸರು ನೀಡಬೇಕು ಎಂದು ನಾರಾ ಭರತ್ ರೆಡ್ಡಿ ಹೇಳಿದರು.
35ನೇ ವಾರ್ಡ್ ಗೆ 5 ಕೋಟಿ ರೂ. ವೆಚ್ಚದಲ್ಲಿ ಎಸ್ಟಿ ಹಾಸ್ಟೇಲ್ ಮಂಜೂರು ಆಗಿದೆ, ಈವರೆಗೆ ಬಳ್ಳಾರಿ ನಗರ ಕ್ಷೇತ್ರಕ್ಕೆ ವಿವಿಧ ಕಾಮಗಾರಿ ಸೇರಿದಂತೆ ಅಂದಾಜು 65 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದೇನೆ, ಮುಂದಿನ ಮೂರು ವರ್ಷಗಳಲ್ಲಿ ಇಡೀ ರಾಜ್ಯದಲ್ಲೇ ಅತ್ಯಂತ ಮಾದರಿಯಾದ ಕ್ಷೇತ್ರವನ್ನಾಗಿ ಬಳ್ಳಾರಿಯನ್ನು ರೂಪಿಸಲಿದ್ದೇನೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮೇಯರ್ ಬಿ.ಶ್ವೇತಾ; ಅಂಗನವಾಡಿ ಕೇಂದ್ರಗಳಿಗೆ ರೆಫ್ರಿಜರೇಟರ್ ನೀಡುತ್ತಿರುವುದು ಹೆಮ್ಮೆಯ ವಿಷಯ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಹಣ್ಣು, ತರಕಾರಿ ಮೊದಲಾದ ಪೌಷ್ಟಿಕಾಂಶ ಆಹಾರ ನೀಡಲಾಗುತ್ತದೆ. ಈ ಆಹಾರವನ್ನು ಸಂರಕ್ಷಿಸಲು ರೆಫ್ರಿಜರೇಟರ್ ಗಳು ಸಹಕಾರಿ ಆಗಲಿವೆ ಎಂದು ಹೇಳಿದರು.
ಉಪಮೇಯರ್ ಜಾನಕಮ್ಮ ಮಾತನಾಡಿ; ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಪ್ರಾಥಮಿಕ ಶಾಲೆ ಹಾಗೂ ಹೈಸ್ಕೂಲ್ ಶಿಕ್ಷಕರ ಕೆಲಸಕ್ಕಿಂತ ಜವಾಬ್ದಾರಿಯುತ ಕೆಲಸ. ಚಿಕ್ಕ ಚಿಕ್ಕ ಮಕ್ಕಳನ್ನು ನಿರ್ವಹಣೆ ಮಾಡುವುದು ಗುರುತರ ಕೆಲಸ. ಪೋಷಕರಿಗೇ ಮಕ್ಕಳನ್ನು ಜೋಪಾನ ಮಾಡುವುದು ಒಮ್ಮೊಮ್ಮೆ ಹೊರೆ ಎನಿಸುತ್ತದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಪೋಷಕರ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಮಹತ್ತರವಾದುದು ಎಂದು ಹೇಳಿದರು.
ನಗರದ ಬಹಳಷ್ಟು ಅಂಗನವಾಡಿಗಳು ಭಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅಂತಹ ಕಟ್ಟಡಗಳನ್ನು ಗುರುತಿಸಿ ಶಾಶ್ವತ ಕಟ್ಟಡ ನಿರ್ಮಿಸಿ ಕೊಡಬೇಕೆಂದು ಅವರು ಶಾಸಕರಿಗೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ 35ನೇ ವಾರ್ಡಿನ ಸದಸ್ಯ ಮಿಂಚು ಶ್ರೀನಿವಾಸುಲು ತಮ್ಮ ವಾರ್ಡಿಗೆ ಮಂಜೂರಾಗಿರುವ ಎಸ್ಟಿ ಹಾಸ್ಟೇಲ್ ಬದಲಾಗಿ ಜನರಲ್ ಹಾಸ್ಟೇಲ್ ಮಂಜೂರು ಮಾಡಿಸಿ ಕೊಡಬೇಕು, ಇದು ಸ್ಥಳೀಯರ ಆಗ್ರಹವಾಗಿದೆ ಎಂದು ಮನವಿ ಮಾಡಿದರು.
ಈ ವೇಳೆ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಯಿತು.
ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಹೊನ್ನಪ್ಪ, ಪಿ.ಜಗನ್, ನಾಗಲಕೆರೆ ಗೋವಿಂದ, ಮಹಮ್ಮದ್, ಪಾಲಿಕೆ ಸದಸ್ಯರಾದ ಎಂ.ಪ್ರಭಂಜನಕುಮಾರ್, ನೂರ್ ಮೊಹಮ್ಮದ್, ರಾಮಾಂಜನೇಯ, ಪೆರ್ರಂ ವಿವೇಕ್, ವಿ.ಕುಬೇರಾ, ಸ್ಥಳೀಯ ಮುಖಂಡರಾದ ಗಾಜಣ್ಣ, ಡಿ.ಮೋಹನದಾಸ್, ಶೇಖಣ್ಣ, ಎಸ್ಡಿಎಂಸಿ ಅಧ್ಯಕ್ಷ ಮಾರುತಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪಿ.ಹೊನ್ನೂರಬಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಕಣಮಕ್ಕ, ಶಿಕ್ಷಕರಾದ ಮೇರಿ, ರೋಶನಿ, ಉಚ್ಚಂಗಮ್ಮ ಮೊದಲಾದವರು ಹಾಜರಿದ್ದರು.