ತ್ರಿಶ್ಶೂರ್ (ಕೇರಳ),ಜ,೧೭: ಕೇರಳದ ಗುರುವಾಯೂರಿನಲ್ಲಿರುವ ಪ್ರಸಿದ್ಧ ಶ್ರೀಕೃಷ್ಣ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನಕ್ಕೆ ಆಗಮಿಸಿದ ಮೋದಿ ಸಾಂಪ್ರದಾಯಿಕ ಮಲಯಾಳಿ ಶೈಲಿಯಲ್ಲಿ ಬಿಳಿ ಮುಂಡು (ಧೋತಿ), ಶರ್ಟ್ ಮತ್ತು ಶಾಲು ಧರಿಸಿದ್ದರು. ಗುರುವಾಯೂರು ದೇವಾಲಯದಲ್ಲಿ ನಡೆದ ಬಿಜೆಪಿ ನಾಯಕ , ನಟ ಸುರೇಶ್ ಗೋಪಿ ಅವರ ಮಗಳು ಭಾಗ್ಯಾ ಸುರೇಶ್ ಅವರ ಮದುವೆಯಲ್ಲಿ ಮೋದಿ ಭಾಗಿಯಾಗಿದ್ದಾರೆ. ಮದುವೆಯಲ್ಲಿ ತಾಳಿ ಕಟ್ಟಿದ ನಂತರ ನವ ದಂಪತಿಗಳು ಪರಸ್ಪರ ಹಾರ ಬದಲಾಯಿಸುವಾಗ ಮೋದಿಯವರೇ ದಂಪತಿ ಕೈಗೆ ಹಾರ ಕೊಟ್ಟಿದ್ದಾರೆ.ಮಮ್ಮುಟ್ಟಿ, ಮೋಹನ್ಲಾಲ್ ಮತ್ತು ದಿಲೀಪ್ ಸೇರಿದಂತೆ ಮಲಯಾಳಂ ಚಿತ್ರರಂಗದ ಸೂಪರ್ಸ್ಟಾರ್ಗಳು ಸಹ ಅಲ್ಲಿ ಹಾಜರಿದ್ದರು. ಪ್ರಧಾನಿ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ ಎಂದ ಭದ್ರತಾ ವ್ಯವಸ್ಥೆ ಕರ್ತವ್ಯದಲ್ಲಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.ಸುರೇಶ್ ಗೋಪಿ ಅವರ ಮಗಳ ಮದುವೆಗೂ ಮುನ್ನ ಬೆಳಗ್ಗೆ ದೇವಸ್ಥಾನದಲ್ಲಿ ವಿವಾಹವಾದ ದಂಪತಿಗಳಿಗೆ ಪ್ರಧಾನಿ ಆಶೀರ್ವದಿಸಿ ಸಿಹಿತಿಂಡಿಗಳನ್ನು ನೀಡಿದ್ದಾರೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಾಲಯಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಬೆಳಗ್ಗೆ ೭.೩೫ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಗುರುವಾಯೂರಿಗೆ ಆಗಮಿಸಿದ ಪ್ರಧಾನಿ ಮೋದಿ ಶ್ರೀಕೃಷ್ಣ ಕಾಲೇಜು ಮೈದಾನದಲ್ಲಿ ಬಂದಿಳಿದಿದ್ದು, ನೂರಾರು ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ಅವರನ್ನು ಸ್ವಾಗತಿಸಲು ಗಂಟೆಗಟ್ಟಲೆ ಜಮಾಯಿಸಿದ್ದರು. ಎಲ್ಲಾ ವಯಸ್ಸಿನ ಜನರು ಹೆಲಿಪ್ಯಾಡ್ನಲ್ಲಿ ಬಿಜೆಪಿ ಧ್ವಜಗಳನ್ನು ಬೀಸುತ್ತಾ ಮತ್ತು ಪಕ್ಷದ ಬಣ್ಣಗಳಲ್ಲಿ ಟೋಪಿಗಳು ಮತ್ತು ಕ್ಯಾಪ್ಗಳನ್ನು ಧರಿಸಿ ಪ್ರಧಾನಿಯನ್ನು ಸ್ವಾಗತಿಸಿದರು.
ಹೆಲಿಪ್ಯಾಡ್ನಿಂದ ಶ್ರೀವಲ್ಸಮ್ ಗೆಸ್ಟ್ ಹೌಸ್ಗೆ ತೆರಳಿದ ಪ್ರಧಾನಿ ಮೋದಿ ಅಲ್ಲಿ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ತೆರಳುವ ಮುನ್ನ ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ಬದಲಾಯಿಸಿಕೊಂಡರು.ನAತರ ಅವರು ತ್ರಿಶ್ಶೂರ್ ಜಿಲ್ಲೆಯ ತ್ರಿಪ್ರಯಾರ್ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಕೊಚ್ಚಿಗೆ ಹಿಂದಿರುಗುವ ಮೊದಲು ಅಲ್ಲಿ ಕೇಂದ್ರ ಸರ್ಕಾರ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕೇರಳಕ್ಕೆ ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ಮಂಗಳವಾರ ಸಂಜೆ ಕೇರಳಕ್ಕೆ ಆಗಮಿಸಿದ್ದರು.