ಕೊಪ್ಪಳ (ಏ.16): ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಕರಡಿ ಸಂಗಣ್ಣ ಅವರು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಪತ್ರವನ್ನು ಸಲ್ಲಿಕೆ ಮಾಡಿದ್ದು, ಇದನ್ನು ಅಂಗೀಕಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ಹಾಲಿ ಸಂಸದರೂ ಆಗಿದ್ದ ಕರಡಿ ಸಂಗಣ್ಣ ಅವರಿಗೆ ಈ ಬಾರಿ ಲೋಕಸಭೆ ಟಿಕೆಟ್ ಕೊಡದೇ ಹೊಸ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಆರಂಭದಿಂದಲೂ ಅಸಮಾಧಾನ ಹೊರ ಹಾಕಿದ್ದ ಕರಡಿ ಸಂಗಣ್ಣ ಅವರು, ನಮ್ಮ ಲೋಕಸಭಾ ಟಿಕೆಟ್ ಅನ್ನು ಪುನಃ ಬದಲಾಯಿಸಿ ತಮಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದರು. ಇದ್ಯಾವುದಕ್ಕೂ ಬಿಜೆಪಿ ಹೈಕಮಾಂಡ್ ಆಗಲೀ ಅಥವಾ ರಾಜ್ಯ ಬಿಜೆಪಿ ನಾಯಕರಾಗಲೂ ಸೊಪ್ಪು ಹಾಕಲಿಲ್ಲ. ಇದರಿಂದಾಗಿ ಮನನೊಂದ ಸಂಸದ ಕರಡಿ ಸಂಗಣ್ಣ ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.