ಹುಬ್ಬಳ್ಳಿ: ವೈಯಕ್ತಿಕ ಕಾರಣಕ್ಕೆ ನೇಹಾ ಕೊಲೆ ಆಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನೇಹಾ ತಂದೆ, ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ ಅವರು, ತಮ್ಮ ಮಗಳ ಕೊಲೆ ಹಿಂದೆ ದೊಡ್ಡ ಗ್ಯಾಂಗ್ ಇದೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೊರೇಟರ್ ಆಗಿರುವ ನಿರಂಜನ್ ಹಿರೇಮಠ ಅವರು, ಸಿಎಂ ಸಿದ್ದರಾಮಯ್ಯ ನಮ್ಮ ಕುಟುಂಬಕ್ಕೆ ಕಳಂಕ ತರುವ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳೇ ನಮ್ಮ ಮರ್ಯಾದೆ ತೆಗಿಬೇಡಿ ಎಂದು ಕಿಡಿ ಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಿರಂಜನ್ ಹಿರೇಮಠ, ಬಂಧಿತ ಆರೋಪಿ ಫಯಾಜ್ ಕೊಂಡಿಕೊಪ್ಪ ಸೇರಿ ನಾಲ್ವರು ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ನಿಮ್ಮ ಮೇಲೆ ರಾಜ್ಯದ ಜನತೆಗೆ ಅಪಾರ ಗೌರವವಿದ್ದು, ಅದಕ್ಕಾಗಿ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಈಗಾಗಲೇ ಒಬ್ಬನನ್ನ ಅರೆಸ್ಟ್ ಮಾಡಿದ್ದೀರಿ. ಈ ಕೊಲೆಯ ಹಿಂದೆ ಇನ್ನೂ ನಾಲ್ಕು ಜನರಿದ್ದು, ಅವರನ್ನು ಬಂಧಿಸುವ ಕೆಲಸ ಆಗಬೇಕು. ಬಂಧಿತನಾಗಿರುವ ಯುವಕನನ್ನು ಎನ್ಕೌಂಟರ್ ಮಾಡಬೇಕು ಎಂದು ನಿರಂಜನ್ ಹಿರೇಮಠ ಸರ್ಕಾರವನ್ನು ಆಗ್ರಹಿಸಿದರು.
“ನಾವು ಎಲ್ಲಾ ನಾಲ್ವರ ಹೆಸರುಗಳನ್ನು ಪೊಲೀಸರಿಗೆ ನೀಡಿದ್ದೇವೆ ಮತ್ತು ತನಿಖೆ ನಡೆಸಲಾಗುತ್ತಿದೆ”. “ಆ ನಾಲ್ವರು ಹೊರಗಿನವರು. ಈ ಘಟನೆ ಕೇವಲ ಒಂದೇ ದಿನದಲ್ಲಿ ನಡೆದಿದ್ದಲ್ಲ. ಗ್ಯಾಂಗ್ ಬಹಳ ದಿನಗಳಿಂದ ಸಂಚು ರೂಪಿಸಿತ್ತು. ಅವರು ನನ್ನ ಮಗಳನ್ನು ಬಲೆಗೆ ಬೀಳಿಸಲು ಅಥವಾ ಅವಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಆಕೆಗೆ ಬೆದರಿಕೆ ಹಾಕಿದ್ದಾರೆ. ಆದರೆ, ಅವರ ಬೆದರಿಕೆಗೆ ನನ್ನ ಮಗಳು ಸೊಪ್ಪು ಹಾಕಿರಲಿಲ್ಲ’ ಎಂದು ನಿರಂಜನ್ ಹೇಳಿದ್ದಾರೆ.
ಮಾನ್ಯ ಸಿದ್ದರಾಮಯ್ಯನವರೇ ನಿಮ್ಮನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ. ನಾನು ಕಾಂಗ್ರೆಸ್ ಕಾರ್ಪೊರೇಟರ್. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನನ್ನ ಕುಟುಂಬದ ಬಗ್ಗೆ ನೀವೇ ಹೀಗೆ ಮಾತನಾಡಿದ್ರೆ ಹೇಗೆ? ನಾವು ಕಣ್ಣೀರು ಹಾಕುತ್ತಿದ್ದೇವೆ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ನನ್ನ ಕುಟುಂಬದ ಮರ್ಯಾದೆ ತೆಗಿಬೇಡಿ” ಎಂದು ಮನವಿ ಮಾಡಿದರು.