ದಾವಣಗೆರೆ: “ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಕೊಲೆಯಾದ ಬಾಲಕಿಯ ತಾಯಿ ಸುಶಿಕ್ಷಿತಳಾಗಿದ್ದು, ದ್ವಿತೀಯ ಪಿಯುಸಿ ಓದಿದ್ದಾಳೆ. ಎನ್ಜಿಒವೊಂದರಲ್ಲಿ ಕೆಲಸ ಮಾಡಿದ್ದಾಳೆ. ಈಗ ಮನೆಗೆಲಸ ಮಾಡುತ್ತಿದ್ದಾಳೆ. ಆಕೆಗೆ ಗಂಡು ಮಗು ಮಾಡುಕೊಳ್ಳುವಂತೆ ಎಲ್ಲರೂ ಹೇಳುತ್ತಿದ್ದರಂತೆ. ಆದ್ರೆ ತನಗೆ ಈ ಮಗುವೇ ಸಾಕು, ಇವಳಿಗೆ ಚೆನ್ನಾಗಿ ಓದಿಸುತ್ತೇನೆ. ಇನ್ನೊಂದು ವಿಶೇಷ ಚೇತನ ಮಗುವಿದೆ. ಮತ್ತೊಂದು ಮಗು ಬೇಡ ಎಂದು ಹೇಳಿ ಆಪರೇಷನ್ ಮಾಡಿಕೊಂಡಿದ್ದರಂತೆ. ಗಂಡ -ಹೆಂಡತಿ ದುಡಿದು ಮಕ್ಕಳನ್ನು ಸಾಕುತ್ತಿದ್ದರು” ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಿನ್ನೆ ಹುಬ್ಬಳ್ಳಿಯಲ್ಲಿ ಕೊಲೆಯಾದ ಬಾಲಕಿಯ ತಾಯಿಯನ್ನು ಭೇಟಿ ಮಾಡಿದ್ದೆ. ಆಕೆಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡ ಮಗು ವಿಶೇಷ ಚೇತನ. ಕೊಲೆಯಾದ ಬಾಲಕಿ ಎರಡನೇ ಮಗುವಾಗಿದ್ದು, ಆಕೆಗೆ ನಾಲ್ಕು ವರ್ಷ ವಯಸ್ಸು ಆಗಿತ್ತು. ತಾಯಿಯ ಮಗಳನ್ನು ಯಾವಾಗಲೂ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಿದ್ದರು. ಘಟನೆ ನಡೆದ ದಿನವೂ ಸಹ ತಾಯಿ ಮನೆಗೆಲಸಕ್ಕೆ ಹೋಗುವಾಗ ಬಾಲಕಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಳು. ಕಾಂಪೌಂಡ್ ಬಳಿ ಬಾಲಕಿಯನ್ನು ಬಿಟ್ಟು ಮನೆಯೊಳಗೆ ಪಾತ್ರೆ ಇಟ್ಟು ಬರಲು ಹೋದ 10 ನಿಮಿಷದಲ್ಲಿ ರಿತೇಶ್ ಕುಮಾರ್ ಆ ಮಗುವನ್ನು ಎತ್ತಿಕೊಂಡು ಹೋಗಿದ್ದ” ಎಂದು ವಿವರಿಸಿದರು.
“ತಾಯಿ ಬಂದು ನೋಡಿದಾಗ ಮಗು ಕಂಡಿಲ್ಲ. ತಕ್ಷಣ ತನ್ನ ಪತಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯ ತೆಗೆಸಿದಾಗ ವಿಷಯ ಗೊತ್ತಾಗಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಒಂದು ಗಂಟೆಗೊಳಗೆ ಆರೋಪಿ ಅದೇ ಜಾಗದಲ್ಲಿ ಸಿಕ್ಕಿದ್ದ. ತನಿಖೆಗೆ ಕರೆದುಕೊಂಡು ಹೋಗುವಾಗ ಪೊಲೀಸರ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ. ಆ ಸಮಯಕ್ಕೆ ಮಹಿಳಾ ಇನ್ಸ್ಪೆಕ್ಟರ್ ಸರಿಯಾದ ನಿರ್ಣಯ ತೆಗೆದುಕೊಂಡು ಆರೋಪಿಯನ್ನು ಎನ್ಕೌಂಟರ್ ಮಾಡಿದ್ದಾರೆ. ಎನ್ಕೌಂಟರ್ ಮಾಡಿದ ಮಹಿಳಾ ಇನ್ಸ್ಪೆಕ್ಟರ್ಗೆ ನಿನ್ನೆ ಕತ್ತು ತಿರುಗಿಸಲು ಆಗುತ್ತಿರಲಿಲ್ಲ. ಒಂದು ಕೈ ಎತ್ತಲು ಸಹ ಆಗುತ್ತಿರಲಿಲ್ಲ. ಕಾನ್ಸ್ಟೇಬಲ್ಗಳಿಬ್ಬರ ಮೇಲೆ ಆರೋಪಿ ಹಲ್ಲೆ ಮಾಡಿದ್ದಾನೆ” ಎಂದು ಅವರು ತಿಳಿಸಿದರು.