ಬೆಂಗಳೂರು: ಬೆಂಗಳೂರಿನ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಬಟ್ಟೆ ಗಲೀಜು ಎಂಬ ಕಾರಣಕ್ಕೆ ರೈತನಿಗೆ ಪ್ರವೇಶ ನಿರಾಕರಿಸಿ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(NHRC) ರಾಜ್ಯ ಸರ್ಕಾರ ಮತ್ತು ಬಿಎಮ್ಆರ್ಸಿಎಲ್ಗೆ ನೋಟಿಸ್ ಜಾರಿ ಮಾಡಿದೆ.
ಕಳೆದ ಸೋಮವಾರ ಹಾಕಿಕೊಂಡಿರುವ ಬಟ್ಟೆ ಕ್ಲೀನ್ ಇಲ್ಲ ಎಂಬ ಕಾರಣಕ್ಕಾಗಿ ರೈತರೊಬ್ಬರಿಗೆ ಮೆಟ್ರೋ ಪ್ರವೇಶಿಸಲು ಅವಕಾಶ ನೀಡದೆ ಅಪಮಾನ ಮಾಡಿದ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಈ ಸಂಬಂಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿರುವ ಎನ್ಎಚ್ ಆರ್ ಸಿ, ವ್ಯಕ್ತಿಯ ಬಟ್ಟೆಯ ಆಧಾರದ ಮೇಲೆ ಸಾರ್ವಜನಿಕ ಸಾರಿಗೆಯಲ್ಲಿ ಅವಕಾಶ ನಿರಾಕರಣೆ ಮಾಡುವಂತಿಲ್ಲ. ಆ ರೀತಿಯಾದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ವರದಿ ನೀಡುವಂತೆ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದ್ದು, ನಾಲ್ಕು ವಾರದಲ್ಲಿ ಘಟನೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದೆ.
ಈ ಮಧ್ಯೆ, ಬಟ್ಟೆ ಕ್ಲೀನ್ ಇಲ್ಲವೆಂದು ರೈತನನ್ನು ಒಳಗೆ ಬಿಡದ ಮೆಟ್ರೋ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರನ್ ಅವರು ಹೇಳಿದ್ದಾರೆ.