ಬೆಂಗಳೂರು: ನಾನು ಯೂಟರ್ನ್ ಹೊಡೆಯುವ ಗಿರಾಕಿ ಅಲ್ಲ, ನನ್ನ ಉದ್ದೇಶದ ಬಗ್ಗೆ ನನ್ನ ಆಲೋಚನೆಗಳಲ್ಲಿ ಸ್ಪಷ್ಟತೆಯಿದೆ. ಒಂದು ವರ್ಷದ ಹಿಂದೆ ಕೇಳಿದ್ದಾಗಲೂ ನಾನು ಇದೇ ಮಾತನ್ನು ಹೇಳಿದ್ದೆ, ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾನು ಟಿಕೆಟ್ ಆಕಾಂಕ್ಷಿಯಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಮಂಡ್ಯ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ನಾನು ನಿಲ್ಲುತ್ತಿದ್ದೇನೆ ಎಂಬ ಸುದ್ದಿಗಳು ಹರಿದಾಡುತ್ತಿವೆ, ಇದು ನಿಜವಲ್ಲ, ಕಳೆದ 25 ದಿನಗಳಿಂದ ಹಳೆ ಮೈಸೂರು ಭಾಗದ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ತಾಲ್ಲೂಕುಗಳ ಮುಖಂಡರು, ಅಭ್ಯರ್ಥಿಗಳ, ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರ ಗಮನಕ್ಕೆ ತರುವ ಜವಾಬ್ದಾರಿಯನ್ನು ಪಕ್ಷ ನನಗೆ ಕೊಟ್ಟಿದೆ. ಮಂಡ್ಯ ಜಿಲ್ಲೆಯ ಹಲವು ತಾಲ್ಲೂಕುಗಳಿಗೆ ಹೋಗಿ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದೇನೆ ಎಂದರು.
2019ರ ಲೋಕಸಭೆ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿ ನಿಂತು ಸೋತಿದ್ದೆ. ಈ ಬಾರಿ ಚುನಾವಣೆ ಪ್ರಕ್ರಿಯೆಯಲ್ಲಿ ನೀವು ಬರಬೇಕು, ಸಕ್ರಿಯವಾಗಿ ಭಾಗವಹಿಸಬೇಕೆಂದು ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.ಹೀಗಾಗಿ ಅವರ ಮಾತಿಗೆ ಬೆಲೆಕೊಟ್ಟು ಕೇವಲ ಮಂಡ್ಯ ಮಾತ್ರವಲ್ಲದೆ 28 ಲೋಕಸಭಾ ಕ್ಷೇತ್ರಗಳಿಗೆ ಹೋಗಿ ಪ್ರಚಾರ ನಡೆಸುವ, ಜನರ ಪ್ರೀತಿ-ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.
ಕುಮಾರಸ್ವಾಮಿ ವಿಶ್ರಾಂತಿ ಪಡೆಯುತ್ತಿದ್ದಾರೆ: ಕೇಂದ್ರದ ಗೃಹ ಸಚಿವರು ಮೈಸೂರಿಗೆ ಬಂದಿದ್ದಾರೆ. ಅಮಿತ್ ಶಾ ಅವರಿಗೆ ಹೃತ್ಪೂರ್ವಕ ಸ್ವಾಗತ. ಕುಮಾರಸ್ವಾಮಿ ಅವರಿಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಇದೆ, ರೆಸ್ಟ್ನಲ್ಲಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಿಲ್ಲ. ಈ ವಿಚಾರವನ್ನು ಅಮಿತ್ ಶಾ ಅವರಿಗೆ ದೂರವಾಣಿ ಕರೆ ಮಾಡಿ ಕುಮಾರಣ್ಣ ತಿಳಿಸಿದ್ದಾರೆ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ರೆಸ್ಟ್ ಮಾಡುತ್ತಿದ್ದು ನಾಳೆ ಅಧಿವೇಶನದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.