ನವದೆಹಲಿ (ಜನವರಿ 26): ನಿತೀಶ್ ಕುಮಾರ್ ‘I.N.D.I.A ಮೈತ್ರಿಕೂಟ ತೊರೆಯೋದು ಬಹುತೇಕ ಪಕ್ಕಾ ಅಗಿದ್ದು, 24 – 48 ಗಂಟೆಯೊಳಗೆ ಯಾವುದೇ ಕ್ಷಣದಲ್ಲಿ ಅವರು ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಮತ್ತೆ ಬಿಜೆಪಿ ಜತೆ ಸೇರಿ ಬಿಜೆಪಿ – ಜೆಡಿಯು ಮೈತ್ರಿ ಸರ್ಕಾರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದೂ ಹೇಳಲಾಗಿದೆ.
ಹಳೆಯ ಮಿತ್ರ ಪಕ್ಷವಾದ ಭಾರತೀಯ ಜನತಾ ಪಕ್ಷದ ಬೆಂಬಲದೊಂದಿಗೆ ಭಾನುವಾರ ಏಳನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಶುಕ್ರವಾರ ಮಧ್ಯಾಹ್ನ ತಿಳಿಸಿವೆ. ಈ ಮೂಲಕ ಬಿಹಾರದ ರಾಜಕೀಯ ಮತ್ತೆ ಕ್ಷಿಪ್ರಗತಿಯಲ್ಲಿ ಬದಲಾಗ್ತಿದೆ.
ಬಹುಮುಖ್ಯವಾಗಿ, ನಿತೀಶ್ ಅವರ ಘರ್ ವಾಪ್ಸಿಯ ಷರತ್ತುಗಳು ಜೆಡಿಯುಗೆ ನೀಡಲಾಗುವ ಲೋಕಸಭಾ ಸ್ಥಾನಗಳ ಕಡಿತವನ್ನು ಒಳಗೊಂಡಿವೆ ಎಂದು ಹೇಳಲಾಗಿದೆ. 2019 ರಲ್ಲಿ ಜೆಡಿಯು 17 ರಲ್ಲಿ ಸ್ಪರ್ಧಿಸಿ 16 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಈ ಬಾರಿ 12-15 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ ಎನ್ನಲಾಗಿದೆ.
ನಿತೀಶ್ ಅವರ ಬಿಜೆಪಿ ಮರು-ಹೊಂದಾಣಿಕೆ ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ರಾಜಕೀಯದಲ್ಲಿ, ಬಾಗಿಲುಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿಲ್ಲ ಎಂಬ ಸುಶೀಲ್ ಕುಮಾರ್ ಮೋದಿಯ ಹೇಳಿಕೆಯ ನಂತರ ಈ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಿದೆ.