ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಕಳೆದ ನಾಲ್ಕು ವರ್ಷಗಳಿಂದ ವರ್ಗಾವಣೆ ನೀಡಲ್ಲ. ಹೀಗಾಗಿ ನಮ್ಮ ಮಕ್ಕಳಿಗೆ ದಯಾಮರಣ ನೀಡಬೇಕೇಂದು ರಾಜ್ಯ ಪೊಲೀಸ್ ಸಿಬ್ಬಂದಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ವಿಜಯಪುರ, ಮಾ.01: ನಮಗೆ ಮತ್ತು ಮಕ್ಕಳಿಗೆ (Children) ದಯಾಮರಣ (Euthanasia) ನೀಡಬೇಕೇಂದು ರಾಜ್ಯ ಪೊಲೀಸ್ (Karnataka Police) ಸಿಬ್ಬಂದಿ ರಾಷ್ಟ್ರಪತಿಗಳಿಗೆ (President) ಪತ್ರ ಬರೆದಿದ್ದಾರೆ. ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಮಾನ್ಯ ವರ್ಗದ ಪೊಲೀಸರಿಗೆ ಕಳೆದ ನಾಲ್ಕು ವರ್ಷಗಳಿಂದ ವರ್ಗಾವಣೆ ನೀಡಿಲ್ಲ. ಇದರಿಂದ ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮತ್ತು ಮಕ್ಕಳ ಆರೈಕೆ, ಲಾಲನೆ, ಪಾಲನೆ-ಪೋಷಣೆ ಸಾಧ್ಯವಾಗುತ್ತಿಲ್ಲ. ಹಾಗೆ ಮಕ್ಕಳ ವಿಧ್ಯಾಭಾಸಕ್ಕೂ ಸಮಸ್ಯೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ವರ್ಗಾವಣೆ ನೀಡುವಂತೆ ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ, ವರ್ಗಾವಣೆಯಾಗಲಿಲ್ಲ. ಹೀಗಾಗಿ ನಮಗೆ ಮತ್ತು ಮಕ್ಕಳಿಗೆ ದಯಾಮರಣ ನೀಡಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಕರ್ನಾಟಕ ರಾಜ್ಯದ ಪೋಲಿಸ್ ಇಲಾಖೆಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಸಾಮಾನ್ಯ ವರ್ಗದವರಿಗೆ ಯಾವುದೇ ವರ್ಗಾವಣೆ ನೀಡಿರುವುದಿಲ್ಲ, ಕೇವಲ ಪತಿ ಪತ್ನಿ ಪ್ರಕರಣದಲ್ಲಿ ವರ್ಗಾವಣೆ ಆದೇಶ ನೀಡಲಾಗಿದೆ. ಡಿಜಿ ಅವರು HRM-3(1)270/2022-23 ಹಾಗೂ HD/93/PPS/2022 ರ ಆದೇಶದಂತೆ ಪಾರ್ದರ್ಶಕವಾಗಿ ಪೋರ್ಟಲ್ ಪ್ರಕಾರ ಅರ್ಹ ಸಿಬ್ಬಂದಿಗಳಿಗೆ ವರ್ಗಾವಣೆ ಆದೇಶ ಮಾಡುವಂತೆ ತಿಳಿಸಿದ್ದಾರೆ. ವರ್ಗಾವಣೆ ಸಂಬಂಧ ನಮ್ಮ ಮಕ್ಕಳು ಅರ್ಜಿ ಸಲ್ಲಿಸಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದರೂ, ವರ್ಗಾವಣೆ ನೀಡಿಲ್ಲ.
- ನಮ್ಮಲ್ಲಿ ಬಹುತೇಕರು ಗ್ರಾಮೀಣ ವಿಭಾಗದ ರೈತರ ಮಕ್ಕಳಾಗಿದ್ದು ಬಹುತೇಕರ ತಂದೆ-ತಾಯಿ ವಯಸ್ಸದವರಾಗಿದ್ದು ಹಾಗೂ ಎಲ್ಲ ಕೆಲಸಗಳಿಗೆ ಬೇರೊಬ್ಬರ ಮೇಲೆ ಅವಲಂಬಿತರಾಗಿದ್ದಾರೆ. ತಂದೆ-ತಾಯಿಯನ್ನು ನೋಡಿಕೊಳ್ಳಲು ನಮ್ಮನ್ನು ಬಿಟ್ಟರೆ ಬೇರೆ ಯಾರು ಇರುವುದಿಲ್ಲ.
- ನಮ್ಮಲ್ಲಿ ಬಹುತೇಕರು ಸುಮಾರು 7 ರಿಂದ 10 ವರ್ಷ ಸೇವೆಯನ್ನು ಸಲ್ಲಿಸಿದ ಹಿರಿಯ ಸಿಬ್ಬಂದಿಯವರಾಗಿದ್ದು, ವರ್ಗಾವಣೆ ಸಿಗುವ ನೀರೀಕ್ಷಣೆಯಲ್ಲಿ ನಮ್ಮ ಮಕ್ಕಳಿಗೆ, ನಮ್ಮ ನಮ್ಮ ಜಿಲ್ಲೆಗಳ ಶಾಲೆಗಳಲ್ಲಿ ದಾಖಲಾತಿಗಳನ್ನು ಕೊಡಿಸಿದ್ದು ವರ್ಗಾವಣೆ ವಿಳಂಬವಾಗುತ್ತಿರುವುದರಿಂದ ಮಕ್ಕಳ ಭವಿಷ್ಯ ಮತ್ತು ಅವರ ಪೋಷಣೆ ಮೇಲೆ ಕಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
- ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳಲು ಆಗದೆ ಸಮಾಜದಲ್ಲಿ ಪ್ರಶ್ನೆ ಮಾಡುವ ಜನರಿಗೆ ಉತ್ತರ ನೀಡಲಾಗದೆ ಮಾನಸಿಕವಾಗಿ ಕಿರುಕುಳವನ್ನು ಅನುಭವಿಸುವಂತಾಗಿದೆ.
- ತಂದೆ-ತಾಯಿ ಊರುಗಳಲ್ಲಿರುವ ಮನೆ ಹಾಗೂ ಜಮೀನುಗಳನ್ನು ಬಿಟ್ಟು ಬರಲಾಗದೆ, ಇಲ್ಲಿಯೇ ಸಾಯುತ್ತೇವೆ ಹೊರತು ನಾವು ಬರುವುದಿಲ್ಲವೆಂದು ಹೇಳುತ್ತಿದ್ದು ಇದರಿಂದ ಇಕ್ಕಟ್ಟಿನ ಪರಿಸ್ಥಿತಿಗೆ ನಾವು ಸಿಲುಕಿ ಹಾಕಿಕೊಂಡಿದ್ದೇವೆ.
- ಪೊಲೀಸ್ ಕಾನ್ ಸ್ಟೇಬಲ್ ಹಾಗೂ ಹೆಡ್ ಕಾನ್ಸ್ ಸ್ಟೇಬಲ್ ಸಿಬ್ಬಂದಿಗಳಾದ ನಾವು ಆರ್ಥಿಕವಾಗಿ ದುರ್ಬಲರಾಗಿದ್ದು ನಮ್ಮ ಕೆಲಸದ ಸ್ಥಳಗಳಿಂದ ಊರಿಗೆ ಓಡಾಡಿಕೊಂಡಿರಲು ತುಂಬಾ ಸಮಸ್ಯೆಯಾಗುತ್ತಿದೆ.
- ಹೀಗಾಗಿ ಪೊಲೀಸ್ ಮಹಾ ನಿರ್ದೇಶಕರು ಹಾಗು ಪೊಲೀಸ್ ಮಹಾ ನಿರೀಕ್ಷಕರು ಮತ್ತು ರಾಜ್ಯ ಸರ್ಕಾರ ಕೇವಲ ಪತಿ ಪತ್ನಿ ಹಾಗೂ ಮಾಜಿ ಸೈನಿಕರಿಗೆ ವರ್ಗಾವಣೆ ನೀಡದೆ ಅವರನ್ನು ವರ್ಗಾವಣೆಯ ಪಟ್ಟಿಯಲ್ಲಿ ಶೇಕಡವಾರು ಆದ್ಯತೆ ನೀಡಿ ಸಾಮಾನ್ಯ ಅಭ್ಯರ್ಥಿಗಳಿಗೂ ವರ್ಗಾವಣೆ ನೀಡಿ. ಕೂಡಲೆ ನಮ್ಮ ಸಮಸ್ಯೆಗೆ ಸ್ಪಂದಿಸಿ ಅಂತರ್ ಜಿಲ್ಲಾ ವರ್ಗಾವಣೆಗೆ ಎಲ್ಲ ಸಿಬ್ಬಂದಿಗಳನ್ನು ಪರಿಗಣಿಸುವಂತೆ ಆದೇಶಿಸಿ ನಮ್ಮ ಸ್ವಂತ ಜಿಲ್ಲೆಗಳಲ್ಲಿ ಮುಂದಿನ ಸೇವೆ ಸಲ್ಲಿಸಲು ಪೊರ್ಟಲ್ ಮೂಲಕ ವರ್ಗಾವಣೆ ಮಾಡಿಕೊಡ ಬೇಕೆಂದು ವಿನಂತಿಸಿಕೊಂಡಿದ್ದಾರೆ.