ಕುರುಗೋಡು : ಕುರುಗೋಡು ಪಟ್ಟಣದಲ್ಲಿ ಮಾರ್ಚ್ 14ರಂದು ನಡೆಯುವ ಐತಿಹಾಸಿಕ ಶ್ರೀ ದೊಡ್ಡ ಬಸವೇಶ್ವರ ಸ್ವಾಮಿ ಮಹಾರಥೋತ್ಸಕ್ಕೆ ಪಟ್ಟಣದ ಪೋಲೀಸ್ ಠಾಣೆ ಆವರಣದಲ್ಲಿ ಪೋಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಇತಿಹಾಸ ಪ್ರಸಿದ್ಧ ಶ್ರೀ ದೊಡ್ಡ ಬಸವೇಶ್ವರ ಸ್ವಾಮಿ ರಥೋತ್ಸವ ಪೂರ್ವಭಾವಿ ಸಭೆಯಲ್ಲಿ ಸಿಪಿಐ ವಿಶ್ವನಾಥ್ ಹಿರೇಗೌಡ,ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಶೇಷ ಹನ್ನೇರಡು ಜನರ ನುರಿತ ಅಪರಾಧ ತಡೆ ಸಿಬ್ಬಂದಿಗಳನ್ನು ನೇಮಿಸಿ ಸೂಕ್ತ ಬಂದೋಬಸ್ತ್ ಮಾಡಲಾಗುವುದು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಬಾರಿ ಮಹಿಳೆಯರು ಹಾಗೂ ಮಕ್ಕಳ ಹಿತದೃಷ್ಟಿಯಿಂದ ಹೆಚ್ಚಿನ ಮುಂಜಾಗೃತಾ ಕ್ರಮವಾಗಿ ವ್ಯವಸ್ಥೆ ಮಾಡಲಾಗಿದ್ದು ತೇರು ಇರುವ ಸುತ್ತಮುತ್ತ ಸ್ವಚ್ಛತೆ ಬಗ್ಗೆ ಗಮನಹರಿಸಲಾಗಿದ್ದು ನಮ್ಮ ಸಿಬ್ಬಂದಿ ಕಣ್ಗಾವಲು ಇರಿಸಿ ಸೂಸುತ್ರ ರಥೋತ್ಸವಕ್ಕೆ ವ್ಯವಸ್ಥೆ ಮಾಡಲಾಗಿದೆ, ಅಲ್ಲದೆ ಪಟ್ಟಣದ ನಾಲ್ಕು ಕಡೆಗಳಲ್ಲಿ ಸೂಕ್ಷ್ಮ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿ ಟ್ರಾಫಿಕ್ ಆಗದಂತೆ ಊರ ಹೊರಗೆ ಬ್ಯಾರಿಕೇಡ್ ಹಾಕುವ ಮೂಲಕ ವಾಹನಗಳನ್ನು ಅಲ್ಲಿಯೇ ನಿಲ್ಲಿಸಲು ವ್ಯವಸ್ಥೆಗೆ ಸೂಚಿಸಲಾಗಿದೆ ಎಂದು ಹೇಳಿದರು.
ನಂತರ ಪುರಸಭೆ ಅಧ್ಯಕ್ಷ ಶೇಖಣ್ಣ ಮಾತನಾಡಿ ಎಲ್ಲಾರ ಸಹಕಾರದಿಂದ ರಥೋತ್ಸವವನ್ನು ಶಾಂತಿ ರೀತಿಯಿಂದ ಎಳೆಯಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು
ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮಗಳ ರಸ್ತೆಗಳ ರೀಪೇರಿ ಭರದಿಂದ ಸಾಗಿದೆ, ಪುರಸಭೆ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಧೂಳು ತಡೆಗಟ್ಟಲು ನೀರು ಸಿಂಪಡನೆ ಈಗಾಗಲೇ ಟ್ಯಾಂಕರ್ ಮೂಲಕ ಪ್ರಾರಂಭ ಮಾಡಲಾಗಿದ್ದು ರಥೋತ್ಸವದಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ,ಮೂಲಭೂತ ಸೌಕರ್ಯಗಳನ್ನು ಒದಗಿಸಿ ರಥೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಮುಕ್ತವಾಗಿ ದೇವರ ದರ್ಶನ ಪಡೆದು ರಥೋತ್ಸವ ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಎಸ್ ಐ ಸುಪ್ರೀತ್ ವಿರುಪಕ್ಷಪ್ಪ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಹನುಮಂತಪ್ಪ ಹಾಗೂ ಪುರಸಭೆ ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ವಿವಿಧ ಇಲಾಖೆಗಳ ಅಧಿಕಾರಿಗಳು, ಪುರಸಭೆ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಇದ್ದರು.