
ಬಳ್ಳಾರಿ: ಕಳ್ಳನೋರ್ವ ಎಟಿಎಂಗೆ ನುಗ್ಗಿ ಹಣ ದೋಚಲು ಪ್ರಯತ್ನಿಸುತ್ತಿರುವಾಗಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಇಲ್ಲಿನ ಬ್ರೂಸ್ಪೇಟೆ ಠಾಣೆ ಪೊಲೀಸರು ಆಂಧ್ರಪ್ರದೇಶ ಮೂಲದ ಯುವಕನನ್ನು ಬಂಧಿಸಿದ್ದಾರೆ.
ಅನಂತಪುರದ ಸಾಯಿನಗರ ನಿವಾಸಿ ಆರ್. ವೆಂಕಟೇಶ್ ಕೋಡಿಗುಡ್ಡು (22) ಬಂಧಿತ ಆರೋಪಿಯಾಗಿದ್ದಾನೆ. ಈತ ಮಂಗಳವಾರ ನಸುಕಿನ ಜಾವದ ಸಮಯದಲ್ಲಿ, ನಗರದ ಕಾಳಮ್ಮ ಸರ್ಕಲ್ ಹತ್ತಿರ ಇರುವ ಆ್ಯಕ್ಸಿಸ್ ಬ್ಯಾಂಕ್ನ ಎಟಿಎಂ ಒಳಗಡೆ ಪ್ರವೇಶಿಸಿ, ಸಿಡಿಎಂ-ಎಟಿಎಂ ಮಷಿನ್ ಜಖಂಗೊಳಿಸಿ, ಹಣ ದೋಚಲು ಪ್ರಯತ್ನಿಸುತ್ತಿದ್ದ. ಈ ವೇಳೆ ಮಾಹಿತಿ ಮೇರೆಗೆ, ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಹಿಡಿಯಲು ಮುಂದಾಗಿದ್ದರು. ಆದರೆ ಯುವಕ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆರೋಪಿ ಎಷ್ಟೇ ಪ್ರಯತ್ನಿಸಿದರೂ ಎದೆಗುಂದದ ಪೊಲೀಸರು ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಎಸ್ಐ ಮಲ್ಲಿಕಾರ್ಜುನ್, ಸಿಬ್ಬಂದಿಯಾದ ಅನಿಲ್ ಹಾಗೂ ಸಿದ್ದೇಶ್

ಪೊಲೀಸರಿಗೆ ಎಸ್ಪಿ ಅಭಿನಂದನೆ
ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆತನ ಹೆಸರು ಹಾಗೂ ಮೂಲದ ಬಗ್ಗೆ ಗೊತ್ತಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಎಟಿಎಂ ದೋಚುವ ಪ್ರಯತ್ನ ವಿಫಲಗೊಳಿಸಿ, ಆರೋಪಿಯನ್ನು ಹಿಡಿಯಲು ಶ್ರಮಿಸಿದ ನಗರದ ಡಿಎಸ್ಪಿ ಚಂದ್ರಕಾಂತ್ ನಂದಾರೆಡ್ಡಿ, ಬ್ರೂಸ್ಪೇಟೆ ಠಾಣೆಯ ಎಎಸ್ಐ ಮಲ್ಲಿಕಾರ್ಜುನ್, ಸಿಬ್ಬಂದಿಯಾದ ಅನಿಲ್ ಹಾಗೂ ಸಿದ್ದೇಶ್ ಅವರಿಗೆ ಎಸ್ಪಿ ಅಭಿನಂದಿಸಿದ್ದಾರೆ.