ಬೆಂಗಳೂರು: ನೈರುತ್ಯ ರೈಲ್ವೆಯು ಸಲ್ಲಿಸಿರುವ 6 ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಅಳವಡಿಸುವ ಪ್ರಸ್ತಾವಕ್ಕೆ ರೈಲ್ವೆ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ.
ಯೋಜನೆಯಂತೆ ಹೆಚ್ಚಿನ ಪ್ರಮಾಣದಲ್ಲಿ ರೈಲುಗಳ ಸಂಚಾರಕ್ಕೆ ಅನುಕೂಲವಾಗಲು ಹಾಗೂ ರೈಲು ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನ ಆರು ಪ್ರಮುಖ ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಸಿಸ್ಟಮ್ ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ಬೆಂಗಳೂರು ನಗರ-ಯಶವಂತಪುರ-ಯಲಹಂಕ 17.75 ಕಿ.ಮೀ., ಯಶವಂತಪುರ-ಅರಸಿಕೆರೆ 160.65 ಕಿ.ಮೀ., ಲೊಟ್ಟೆಗೊಲ್ಲಹಳ್ಳಿ-ಹೊಸೂರು 63.6 ಕಿ.ಮೀ., ವೈಟ್ಫೀಲ್ಡ್-ಜೋಲಾರ್ಪೇಟೆ 119 ಕಿ.ಮೀ., ಬೈಯಪ್ಪನಹಳ್ಳಿ- ಪೆನುಕೊಂಡ (ಚನ್ನಸಂದ್ರ ಮೂಲಕ) 139.8 ಕಿ.ಮೀ., ಬೆಂಗಳೂರು ನಗರ– ಮೈಸೂರು 138.25 ಕಿ.ಮೀ. ಸೇರಿ ಒಟ್ಟು 639.05 ಕಿ.ಮೀ. ಉದ್ದದ ಈ ಮಾರ್ಗಗಳನ್ನು ರೂ.874.12 ಕೋಟಿ ವೆಚ್ಚದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಅಳವಡಿಸುವ ಯೋಜನೆ ಇದಾಗಿದೆ.
ಪ್ರಸ್ತುತ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಕೆಎಸ್ಆರ್ ಬೆಂಗಳೂರು ನಗರ-ವೈಟ್ಫೀಲ್ಡ್ ವಿಭಾಗದಲ್ಲಿ ಆಟೋಮೆಟಿಕ್ ಸಿಗ್ನಲ್ ಅಳವಡಿಕೆ ಮಾಡಲಾಗಿದೆ. ಇದುವರೆಗೂ ರೈಲ್ವೆಯ ರಿಲೇರೂಮ್ನಲ್ಲಿ ಸಿಗ್ನಲ್ಗಳನ್ನು ಸಿಬ್ಬಂದಿ ಕಂಟ್ರೋಲ್ ಮಾಡುತ್ತಿದ್ದಾರೆ. ಇದೀಗ ರಿಲೇರೂಮ್ನಲ್ಲಿ ಆಟೋಮೆಟಿಕ್ ಆಗಿ ಆನ್ ಆಂಡ್ ಆಫ್ ಆಗಲಿವೆ. ಇದರಿಂದ ಒಂದು ಸಮಯದಲ್ಲಿ ಒಂದು ರೈಲಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಜೊತೆಗೆ ಫ್ಲಾಟ್ ಫಾರಂನಲ್ಲಿ ಪ್ರಯಾಣಿಕರು ಹೋಗಲು ಹಾಗೂ ಬರಲು ಅನುಕೂಲ ಆಗಲಿದೆ. ಇದರಿಂದ ರೈಲುಗಳ ದಕ್ಷತೆ ಹೆಚ್ಚಾಗಲಿದ್ದು, ರೈಲ್ವೆ ಇಲಾಖೆಯ ಈ ಕ್ರಮ ಪ್ರಯಾಣಿಕರಲ್ಲಿ ಸಂತೋಷ ತರಿಸಿದೆ.
ಯೇಜನೆಯು ನಿಲ್ದಾಣಗಳಿಂದ ಕೋಚಿಂಗ್ ರೈಲುಗಳ ಕ್ಲಿಯರೆನ್ಸ್ ಅನ್ನು ಖಾತ್ರಿಪಡಿಸುವ ಮೂಲಕ ಪ್ಲಾಟ್ಫಾರ್ಮ್ಗಳಂತಹ ಸ್ಥಿರ ಸ್ವತ್ತುಗಳ ಅತ್ಯುತ್ತಮ ಬಳಕೆಯನ್ನು ಇದು ಅನುಮತಿಸುತ್ತದೆ. ಇದರಿಂದ ರೈಲುಗಳು ತ್ವರಿತವಾಗಿ ನಿರ್ಗಮಿಸಬಹುದು, ವಿಳಂಬವನ್ನು ಕಡಿಮೆ ಮಾಡುತ್ತದೆ. ರೈಲುಗಳ ಸರಾಸರಿ ವೇಗವನ್ನು ಸುಧಾರಿಸುತ್ತದೆ ಮಾರ್ಗದ ಸಾಮರ್ಥ್ಯ ಕೂಡ ಗಣನೀಯವಾಗಿ ಹೆಚ್ಚಾಗಲಿದೆ. ರೈಲುಗಳು ತಡೆರಹಿತವಾಗಿ ಕಾರ್ಯಾಚರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.