ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ನ ಎರಡನೇ ಓವರ್ನ ಎರಡನೇ ಎಸೆತದಲ್ಲಿ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್ಸ್ಟೋವ್ ಅವರನ್ನು ಔಟ್ ಮಾಡುವ ಮೂಲಕ ರವಿಚಂದ್ರನ್ ಅಶ್ವಿನ್ ಆಂಗ್ಲರ ವಿರುದ್ಧದ ಟೆಸ್ಟ್ನಲ್ಲಿ 100 ವಿಕೆಟ್ ಕಿತ್ತರು. ಇದು ಇತಿಹಾಸವಾಗಿದೆ. ಭಾರತದ ಯಾವುದೇ ಬೌಲರ್ ಈ ಸಾಧನೆ ಮಾಡಿಲ್ಲ.
ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶುಕ್ರವಾರ (ಫೆಬ್ರವರಿ 23) ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಮೂಲಕ ಆಂಗ್ಲರ ವಿರುದ್ಧದ ಟೆಸ್ಟ್ನಲ್ಲಿ 100 ವಿಕೆಟ್ ಕಿತ್ತ ಇತಿಹಾಸದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ನ ಎರಡನೇ ಓವರ್ನ ಎರಡನೇ ಎಸೆತದಲ್ಲಿ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್ಸ್ಟೋವ್ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ಈ ಮೈಲಿಗಲ್ಲು ಸಾಧಿಸಿದರು. 37 ವರ್ಷದ ಜೇಮ್ಸ್ ಆಂಡರ್ಸನ್ ನಂತರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ಗಳಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಈ ಅಶ್ವಿನ್ ಆಗಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಆಂಗ್ಲರ ಲೆಕ್ಕಚಾರ ತಲೆಕೆಳಗಾಯಿತು. ಆರಂಭದಲ್ಲೇ ನಾಲ್ಕು ವಿಕೆಟ್ಗಳು ಪತನಗೊಂಡವು. ಆಕಾಶ್ ದೀಪ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಆಂಗ್ಲ ಬ್ಯಾಟರ್ಗಳ ಹುಟ್ಟಡಗಿಸಿ 3 ವಿಕೆಟ್ ಕಿತ್ತಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ಆಕಾಶ್ ದೀಪ್ ಒಂದರ ಹಿಂದೆ ಒಂದರಂತೆ ಆಘಾತ ನೀಡಿದರು. ಭರ್ಜರಿ ಫಾರ್ಮ್ನಲ್ಲಿದ್ದ ಬೆನ್ ಡಕೆಟ್ 11 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರೆ, ಬಂದ ಬೆನ್ನಲ್ಲೇ ಒಲೀ ಪೋಪ್ ಅವರು ಆಕಾಶ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಸಿಲುಕಿದರು.
ಇದರ ನಡುವೆ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಝಾಕ್ ಕ್ರಾಲಿ ಅವರನ್ನು ದೀಪ್ ಕ್ಲೀನ್ ಬೌಲ್ಡ್ ಮಾಡಿದರು. ಕ್ರಾಲಿ 42 ಎಸೆತಗಳಲ್ಲಿ 42 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಜೋ ರೂಟ್ ಹಾಗೂ ಜಾನಿ ಬೈರ್ಸ್ಟೋವ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಆದರೆ, ಈ ಸಂದರ್ಭ ರವಿಚಂದ್ರನ್ ಅಶ್ವಿನ್ ಸ್ಪಿನ್ ಮೋಡಿಗೆ 38 ರನ್ ಗಳಿಸಿದ್ದ ಬೈರ್ಸ್ಟೋವ್ ಬಲಿಯಾದರು.
ನಾಯಕ ಬೆನ್ ಸ್ಟೋಕ್ಸ್ ಕೂಡ 3 ರನ್ಗೆ ನಿರ್ಗಮಿಸಿದರು. ಸದ್ಯ ಇಂಗ್ಲೆಂಡ್ ಭೋಜನ ವಿರಾಮದ ವೇಳೆಗೆ 112 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಮೊದಲ ದಿನದ ಮೊದಲ ಸೆಷನ್ ಭಾರತದ ಪಾಲಾಗಿದೆ. ಆಕಾಶ್ ದೀಪ್ 3 ಹಾಗೂ, ಜಡೇಜಾ- ಆರ್. ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.