ಬಳ್ಳಾರಿ, ಅ.26: ಬಳ್ಳಾರಿ ನಗರ ಹಾಗೂ ಜಿಲ್ಲೆಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನನ್ನ ವೈಯಕ್ತಿಕ ಹಣ ವಿನಿಯೋಗಿಸಿ ಬಳ್ಳಾರಿ ನಗರದಲ್ಲಿ ರಾಯಲ್ ರೆಡ್ ಸ್ಪೋರ್ಟ್ಸ್ ಕ್ಲಬ್ ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸುತ್ತಿದ್ದೇನೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಅವರು ತಮ್ಮ ಜನ್ಮ ದಿನಾಚರಣೆಯ ನಿಮಿತ್ತ ತಾಳೂರು ರಸ್ತೆಯ ನಾಗಪ್ಪನ ಕಟ್ಟೆ ಬಳಿ ನಾರಾ ಭರತ್ ರೆಡ್ಡಿ ಅಭಿಮಾನಿ ಬಳಗ (ಎನ್’ಬಿಆರ್ ಟೀಮ್) ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ – ಔತಣಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೇ ವೇಳೆ ಅವರು ರಾಯಲ್ ರೆಡ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾ ಸಂಸ್ಥೆಯ ಲೋಗೋ ಬಿಡುಗಡೆಗೊಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಮೊದಲಿನಿಂದ ಸಾಕಷ್ಟು ಕ್ರೀಡಾಳುಗಳಿದ್ದು, ಅದರಲ್ಲೂ ವಿಶೇಷವಾಗಿ ಯುವಕರಿಗೆ ಉತ್ತೇಜನ ನೀಡಬೇಕು, ಯುವಜನ ಸಬಲೀಕರಣ ಮಾಡು ಉದ್ಧೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸುತ್ತಿರುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಅವರು; ವೇದ ಮಂತ್ರಗಳಿಗಿಂತ ಮಿಗಿಲಾದುದು ಜನರ ಪ್ರೀತಿ ಮತ್ತು ಆಶೀರ್ವಾದ ಎಂದು ಹೇಳಿದರು.
ರಾಯಲ್ ರೆಡ್ ಸ್ಪೋರ್ಟ್ಸ್ ಕ್ಲಬ್ ಮೂಲಕ ಕ್ರಿಕೆಟ್, ಫುಟ್ಬಾಲ್, ಹಾಕಿ, ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಕಬಡ್ಡಿ ಹಾಗೂ ಅಥ್ಲೆಟಿಕ್ಸ್ ನಲ್ಲಿ ಆಸಕ್ತಿ ಇರುವ ಯುವಕರನ್ನು ಗುರುತಿಸಿ, ತಂಡ ರಚಿಸಿ ತರಬೇತಿ ನೀಡಲಾಗುವುದಲ್ಲದೇ ಕ್ಲಬ್ ಮೂಲಕ ತರಬೇತಿ ಪಡೆಯುವವರಿಗೆ ಉಚಿತ ಸದಸ್ಯತ್ವ ನೀಡುವ ಚಿಂತನೆ ಇದೆ.
ವೇದಿಕೆಯಲ್ಲಿ ಉದ್ಯಮಿ ಶ್ರೀಧರ್, ನಾರಾಯಣ ರೆಡ್ಡಿ, ಪಾಲಿಕೆ ಸದಸ್ಯ ಪಿ.ಗಾದೆಪ್ಪ, ಪಾಲಿಕೆಯ ಪರಾಜಿತ ಅಭ್ಯರ್ಥಿಗಳಾದ ವಿಜಯಕುಮಾರ್ ರೆಡ್ಡಿ, ವೀರೇಂದ್ರ ಮೊದಲಾದವರು ಹಾಜರಿದ್ದರು.