ಪವಾಡ ಪುರುಷ ಎರ್ರಿತಾತ ಸ್ವಾಮಿಯ ಮೂರ್ತಿ ಕೂರಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಾದ-ವಾಗ್ವಾದ ನಡೆದು ಗಲಾಟೆಯಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬಳ್ಳಾರಿ ಜಿಲ್ಲೆ ಕೊಳಗಲ್ ಗ್ರಾಮದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.
ಬಳ್ಳಾರಿ, ಫೆ.24: ದೇವರ ಮೂರ್ತಿ ಕೂರಿಸುವ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿರುವ ಘಟನೆ ಬಳ್ಳಾರಿ ಜಿಲ್ಲೆ ಕೊಳಗಲ್ ಗ್ರಾಮದಲ್ಲಿ ನಡೆದಿದೆ. ಪವಾಡ ಪುರುಷ ಎರ್ರಿತಾತ ಸ್ವಾಮಿಯ (Chellagurki Shri Yerrithatha Swamy) ಮೂರ್ತಿ ಕೂರಿಸುವ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದೆ. ಇದರಿಂದ ಕೊಳಗಲ್ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಡಿಎಆರ್ ತುಕಡಿ ಜೊತೆ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ದೇವಸ್ತಾನ ಕಟ್ಟುವ ವಿಚಾರದಲ್ಲಿ ಎರಡು ಗುಂಪುಗಳು ಕೋರ್ಟ್ ಮೆಟ್ಟಿಲೇರಿದ್ದವು. ಕೋರ್ಟ್ನಲ್ಲಿ ಸದ್ಯಕ್ಕೆ ದೇವಸ್ತಾನದ ಗೋಪುರ ಹಾಗು ಕಾಂಪೌಂಡ್ ಕಟ್ಟಲು ಪರ್ಮಿಷನ್ ಸಿಕ್ಕಿತ್ತು. ಆದ್ರೆ ಗೋಪುರ ಕಟ್ಟಿ, ಇಂದು ನಸುಕಿನ ವೇಳೆ ದೇವಸ್ಥಾನದ ಒಳಗೆ ಒಂದು ಗುಂಪು ಮೂರ್ತಿ ಕೂರಿಸಿದೆ. ಇದಕ್ಕೆ ಇನ್ನೊಂದು ಗುಂಪಿನಿಂದ ಪ್ರಬಲ ವಿರೋಧ ವ್ಯಕ್ತವಾಗಿದ್ದು, ಮೂರ್ತಿ ತೆರವುಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ. ಈ ವಿಚಾರ ಗಲಾಟೆಗೆ ತಿರುಗಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.