ಕೊಟ್ಟೂರು; (ಫೆ.02): ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ವಚನಕಾರ ಶಿವಶರಣ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ತಹಶೀಲ್ದಾರು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ಅಮರೇಶ.ಜಿ.ಕೆ. ಇವರು ಶಿವಶರಣ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಣೆ ಮಾಡಿ ಚಾಲನೆ ನೀಡಿದರು. 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಶರಣ ಚಳುವಳಿ ನಡೆದಿದ್ದು, ಎಲ್ಲರನ್ನೂ ಕಲ್ಯಾಣದ ಕಡೆ ಬರುವಂತೆ ಮಾಡಿದೆ. ಜಗಜ್ಯೋತಿ ಬಸವಣ್ಣನವರ ಮುಂದಾಳತ್ವದಲ್ಲಿ ನಡೆದ ಸಮಾಜಿಕ ಕ್ರಾಂತಿಯಲ್ಲಿ ಅನೇಕ ತಳ ಸಮುದಾಯದ ವ್ಯಕ್ತಿಗಳು ಶರಣರಾಗಿ ಸಮಾಜಕ್ಕೆ ಮಾರ್ಗದರ್ಶನವನ್ನು ನೀಡಿದ್ದಾರೆ. ಅಂತಹವರಲ್ಲಿ ಮಡಿವಾಳ ಮಾಚಿದೇವರು ಸಹಾ ಪ್ರಮುಖರು. ಕಲ್ಯಾಣದ ಕ್ರಾಂತಿಯ ನಂತರ ಅನೇಕ ಶರಣರ ಕಗ್ಗೊಲೆಮಾಡಿ, ವಚನದ ಕಟ್ಟುಗಳ ಸುಟ್ಟು ಅವರ ವಿಚಾರಧಾರೆಗಳನ್ನು ನಾಶ ಮಾಡುವ ಪ್ರಯತ್ನ ನಡೆಯಿತು. ಇದರ ಸುಳಿವನ್ನು ಮುನ್ನವೇ ಅರಿತು ಚನ್ನಬಸವಣ್ಣ, ಅಕ್ಕನಾಗಲಾಂಬಿಕೆ ಮುಂತಾದ ಶರಣರು ವಚನಗಳ ಕಟ್ಟುಗಳನ್ನು ಹೊತ್ತು ಉಳವಿಯ ಕಡೆಗೆ ಸಂಚರಿಸಿದ ಸಮಯದಲ್ಲಿ ಬೆನ್ನತ್ತಿದವರನ್ನ ವೀರಾವೇಶದಿಂದ ಕತ್ತಿಹಿಡಿದು ಹೋರಾಡಿ ಹಿಮ್ಮೆಟ್ಟಿಸಿ ವಚನದ ಕಟ್ಟುಗಳನ್ನ, ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರವಾದ ವಚನ ಸಾಹಿತ್ಯವನ್ನು ಸಂರಕ್ಷಿಸಿದ ಕೀರ್ತಿ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆಂದು ಶರಣದ ಬದುಕನ್ನ ಸ್ಮರಿಸಿದರು.
ಮಡಿವಾಳ ಮಾಚಿದೇವರು ಸಾಮಾನ್ಯ ಜನರ ಬಟ್ಟೆಗಳನ್ನು ತೊಳೆಯುತ್ತಿರಲಿಲ್ಲ. ಶಿವಶರಣ ಬಟ್ಟೆಗಳನ್ನು ಮಾತ್ರ ತೊಳೆಯುತ್ತಿದ್ದರು. ಅವು ವಜ್ರದಂತೆ ಹೊಳೆಯುವಂತೆ ಶುಭ್ರಗೊಳಿಸುತ್ತಿದ್ದರು. ಅವರು ವೀರಭದ್ರನ ಅವತಾರ ಪುರುಷರು. ಅವರು ಬಟ್ಟೆಯ ಕೊಳೆಯನ್ನು ಮಾತ್ರವಲ್ಲ ಅಂದಿನ ಸಮಾಜದ ಕೊಳೆಯನ್ನು ಸಹಾ ತೊಳೆದು ಶುಭ್ರ ಸಮಾಜ ನಿರ್ಮಿಸಲು ಶ್ರಮಿಸಿದರು ಎಂದು ನರಸಿಂಹ ಇವರು ಉಪನ್ಯಾಸ ನೀಡಿದರು. ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷರಾದ ಭೀಮಪ್ಪ ಇವರು ನಾವೆಲ್ಲರೂ ಸಂಘಟಿತರಾಗಬೇಕು. ನಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ನೋಡಿಕೊಳ್ಳಬೇಕು. ಮಾನ್ಯ ತಹಶೀಲ್ದಾರರು ನಮ್ಮ ಸಮಾಜಕ್ಕೆ ಅನುಕೂಲವಾಗುವಂತೆ ಕೊಟ್ಟೂರು ಪಟ್ಟಣದಲ್ಲಿ ದೋಬಿ ಘಾಟು ನಿರ್ಮಾಣಕ್ಕೆ ಸ್ಥಳವನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಮಯದಲ್ಲಿ ಮಡಿವಾಳ ಸಮಾಜ ಮುಖಂಡರಾದ ನಾಗಣ್ಣ, ಗುರುಬಸವರಾಜ, ಸುರೇಶ, ಬಸವರಾಜ ಎಂ, ಸಿದ್ದಣ್ಣ, ಪ್ರಕಾಶ, ಕೊಟ್ರೇಶ ಹಾಗೂ ಶಿರಸ್ತೇದಾರರಾದ ಶ್ರೀಮತಿ ಲೀಲಾ.ಎಸ್, ಅನ್ನದಾನೇಶ ಬಿ ಪತ್ತಾರ, ಕಂದಾಯ ನಿರೀಕ್ಷಕರು, ಕಛೇರಿಯ ಸಿಬ್ಬಂದಿ ವಿಜಯಕುಮಾರ ಪುಟಾಣಿ, ದೇವರಾಜ, ಸಿರಾಜ್, ಹನಮಂತ, ಆಶಾ ಎಂ, ಮಂಗಳ, ಯಶೋಧ ಹಾಗೂ ಇತರರು ಭಾಗವಹಿಸಿದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.