ಮೈಸೂರು, ಅಕ್ಟೋಬರ್ 22: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13 ರಂದು ಉಪಚುನಾವಣೆ ನಡೆಯಲಿದೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಕಣ ಜಿದ್ದಾಜಿದ್ದಿಯಿಂದ ಕೂಡಿದೆ. ಸಂಡೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ನಿರೀಕ್ಷೆಯಂತೆ ಸಂಸದ ಇ ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರಿಗೆ ಸಿಗುವುದು ಪಕ್ಕಾ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸಂಡೂರು ಕ್ಷೇತ್ರದಲ್ಲಿ ಸಂಸದ ಇ ತುಕಾರಾಂ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ಕೊಡುತ್ತೇವೆ. ಉಳಿದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಫೈನಲ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆ ಆಗಬಹುದು. ಇನ್ನು, ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರುವ ಬಗ್ಗೆ, ಅವರ ಜೊತೆ ನಾನು ಮಾತನಾಡಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತ ಎಂದು ಹೇಳಿದರು.
ತುಕಾರಾಂ ಪತ್ನಿಗೆ ಟಿಕೆಟ್ ಸಿಗಲು ಹಿಂದಿನ ಕಾರಣ
ಶಾಸಕರಾಗಿದ್ದ ಇ ತುಕಾರಾಂ ಹೈಕಮಾಂಡ್ ಸೂಚನೆ ಮೇರೆಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕ ಶ್ರೀರಾಮುಲು ವಿರುದ್ಧ ಕಣಕ್ಕೆ ಇಳಿದು, ಅದೃಷ್ಟ ಪರೀಕ್ಷೆ ಮುಂದಾಗಿದ್ದರು. ಕೊನೆಗೆ ಗೆಲವು ಸಾಧಿಸಿದರು. ಪಕ್ಷ ನಿಷ್ಠೆಯ ಕಾರಣಕ್ಕೆ ಇ ತುಕಾರಂ ಅವರ ಪತ್ನಿಗೆ ಟಿಕೆಟ್ ಸಿಕ್ಕಿದೆ ಎಂದು ವಿಶ್ಲೇಷಿಸಲಾಗಿದೆ.
ವ್ಯಕ್ತಿ ಪ್ರತಿಷ್ಠೆಯಾದ ಸಂಡೂರು ಚುನಾವಣೆ
ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ಬಿ ನಾಗೇಂದ್ರ ಸಂಡೂರು ಉಪಚುನಾವಣೆಯನ್ನು ವರ್ಚಸ್ಸಾಗಿ ತೆಗೆದುಕೊಂಡಿದ್ದಾರೆ. ಕಳೆದ ವಿಧಾಸನಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಶ್ರೀರಾಮುಲು ಅವರಿಗೆ ಸೋಲಾಗಿತ್ತು. ಈ ಸೋಲಿನಿಂದ ಶ್ರೀರಾಮುಲುಗೆ ಮುಖಭಂಗವಾಗಿದೆ. ಈ ಸೋಲಿನ ಸೇಡನ್ನು ತೇರಿಸಿಕೊಳ್ಳಲು ಶ್ರೀರಾಮುಲು ಹವಣಿಸುತ್ತಿದ್ದಾರೆ.
ಮಾಜಿ ಸಚಿವ ಬಿ ನಾಗೇಂದ್ರ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದು, ಸಂಡೂರು ಚುನಾವಣೆಯಲ್ಲಿ ಧುಮುಕಿದ್ದಾರೆ. ಬಿಜೆಪಿ ಮತ್ತು ಗಣಿ ಧಣಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ನಾನಾ ತಂತ್ರ ಹೆಣೆಯುತ್ತಿದ್ದಾರೆ. ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಈಗಾಗಲೇ ಸಂಡೂರು ಚುನಾವಣೆ ಉಸ್ತುವಾರಿ ಬಿ ನಾಗೇಂದ್ರ ಎಂದು ಘೋಷಿಸಿದ್ದಾರೆ. ಈ ಮೂಲಕ ಹಾಲಿ ಮತ್ತು ಮಾಜಿ ಸಚಿವರ ಸಾರಥ್ಯದಲ್ಲಿ ಸಂಡೂರು ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ದವಾಗಿದೆ.
ಜಾತಿ ಲೆಕ್ಕಾಚಾರ
ಸಂಡೂರು ಎಸ್ಟಿ ವರ್ಗದ ವಿಧಾನಸಭಾ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 221753 ಮತದಾರರು ಇದ್ದು, ಈ ಪೈಕಿ 1,11,109 ಪುರುಷರು, 1,10,619 ಮಹಿಳಾ ಮತದಾರರು ಇದ್ದಾರೆ.
ಪರಿಶಿಷ್ಟ ಪಂಗಡದ ಪ್ರಾಬಲ್ಯ ಹೊಂದಿರುವ ಕ್ಷೇತ್ರ ಇದಾಗಿದೆ. ಸಂಡೂರು ಕ್ಷೇತ್ರದಲ್ಲಿ ಎಸ್ಸಿ ಮತದಾರರು 39,980 ಆಗಿದ್ದು, ಶೇ 18.23ರಷ್ಟಿದ್ದಾರೆ. ಎಸ್ಟಿ ಮತದಾರರು ಸರಿಸುಮಾರ 54,747 ಅಂದರೆ ಶೇ25.02ರಷ್ಟಿದ್ದಾರೆ. ಮುಸ್ಲಿಂ ಮತದಾರರು ಸರಿಸುಮಾರು 25,163 ಇದ್ದಾರೆ.