ಬಳ್ಳಾರಿ,ಫೆ.02 : ಶಿವ ಶರಣರು, ವಚನಕಾರರು ಸಮಾಜದ ಶಾಶ್ವತ ಆಸ್ತಿ. ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜತೆಗೆ ಜ್ಞಾನ ವಿಸ್ತರಣೆಗೆ ಮಡಿವಾಳ ಮಾಚಿದೇವರು ನೀಡಿದ ಕೊಡುಗೆ ಮಹತ್ತರವಾದುದು ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಶ್ವೇತ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ಕುಮಾರ್ ರಸ್ತೆಯ ಬಿಡಿಎಎ ಫುಟ್ಬಾಲ್ ಮೈದಾನದ ವೇದಿಕೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿಶಾಲ ಮನೋಧರ್ಮ ಮಡಿವಾಳ ಸಮುದಾಯದ ಜನರಲ್ಲಿದೆ. ಶಿವಶರಣ ಮಾಚಿದೇವರ ಮಾರ್ಗದರ್ಶನದಿಂದ ಮುನ್ನಡೆಯುತ್ತಿರುವುದೇ ಇದಕ್ಕೆ ಕಾರಣ. ಮಾಚಿದೇವ ಸಮಾಜದ ಕೊಳಕು ತೊಳೆದು ಹಾಕಿದವರು. ಕಾಯಕದ ಆಧಾರದಲ್ಲಿ ವಿಭಜನೆ ಆಗುತ್ತಿರುವ ಸಮಾಜಕ್ಕೆ ಮಾಚಿದೇವರ ಸಂದೇಶ ಆದರ್ಶವಾಗಬೇಕಾದ ಅಗತ್ಯವಿದೆ ಎಂದರು.
ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂ ಭಾಷಾ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಮಾಚಿದೇವ ಸಮಾಜದ ಶ್ರೇಷ್ಠ ವಚನಕಾರರಲ್ಲಿ ಒಬ್ಬರು. 12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರಾಗಿದ್ದಾರೆ ಎಂದು ಹೇಳಿದರು.
ಮೌಢ್ಯಗಳಿಂದ ದೀನರ ಶೋಷಣೆ ನಡೆಯುತ್ತಿದ್ದ ಕಾಲದಲ್ಲಿ ಮಾಚಿದೇವ ಜಾಗೃತಿಯ ಮೂಲಕ ಶೋಷಣೆ ತಡೆಗಟ್ಟಿದರು. ಕಷ್ಟಗಳನ್ನು ಸಹಿಸಿಯೂ ಬಡ ಜನರ ಉದ್ಧಾರಕ್ಕೆ ಮಾರ್ಗದರ್ಶಕರಾದರು’ ಎಂದರು.
ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತವಾದ ಕಾಣಿಕೆ ನೀಡಿದ್ದು, 12ನೇ ಶತಮಾನದ ಕಾಲದಲ್ಲಿ ಇಂತಹ ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಮಹಾಪೌರರಾದ ಬಿ.ಜಾನಕಿ, ತಹಶೀಲ್ದಾರ ಗುರುರಾಜ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಧ್ಯಾ ಕೋಲಾಚಲಂ ತಂಡದಿಂದ ವಚನ ಗಾಯನ ಪ್ರಸ್ತುತ ಪಡಿಸಿದರು.
ಸಂಭ್ರಮದ ಮೆರವಣಿಗೆ: ಮಡಿವಾಳ ಮಾಚಿದೇವ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ಕಳಸ ಹಿಡಿದ ಮಹಿಳೆಯರು ಮತ್ತು ವಿವಿಧ ಸಾಂಸ್ಕøತಿಕ ಕಲಾ ತಂಡಗಳನ್ನೊಳಗೊಂಡು ಸಂಭ್ರಮದಿಂದ ನಡೆಯಿತು. ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಶ್ವೇತ ಅವರು ಚಾಲನೆ ನೀಡಿದರು. ಮೆರವಣಿಗೆಯು ಮುನಿಸಿಪಲ್ ಮೈದಾನದಿಂದ ಆರಂಭವಾಗಿ ಇಂದಿರಾ ವೃತ್ತ, ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೇ ಬ್ರೂಸ್ಪೇಟೆ ಪೊಲೀಸ್ ಠಾಣೆ, ತೇರು ಬೀದಿ, ಹೆಚ್.ಆರ್.ಗವಿಯಪ್ಪ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಬಿಡಿಎಎ ಫುಟ್ಬಾಲ್ ಮೈದಾನದ ವೇದಿಕೆ ಕಾರ್ಯಕ್ರಮಕ್ಕೆ ತಲುಪಿತು.