ಬಳ್ಳಾರಿ,ಮಾ.22 : ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆಯು ಕಟ್ಟುನಿಟ್ಟಾಗಿ ಜಾರಿಯಾಗಿದ್ದು, ಬಳ್ಳಾರಿ ನಗರದಲ್ಲಿ ಸೂಕ್ತ ದಾಖಲೆ ಇಲ್ಲದ 300 ಕುಕ್ಕರ್, 150 ಸ್ಟೋವ್, 66 ಸೀಲಿಂಗ್ ಫ್ಯಾನ್ ಸೇರಿದಂತೆ ಒಟ್ಟು ರೂ.2.58 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಅನಧೀಕೃತವಾಗಿ ಸಾಗಿಸುತ್ತಿದ್ದ 576.18 ಲೀಟರ್ (ಅಂದಾಜು ರೂ.2,26,605 ಮೌಲ್ಯ) ಮದ್ಯ ಮತ್ತು ಎರಡು ವಾಹನ (ರೂ.1 ಲಕ್ಷ ಮೌಲ್ಯದ) ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಪೊಲೀಸ್ ಅಧಿಕಾರಿಗಳಿಂದ 463.13 ಲೀಟರ್ (ರೂ.175148 ಮೌಲ್ಯ) ಮದ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಂದ 113.05 ಲೀಟರ್ (ರೂ.51457 ಮೌಲ್ಯ) ಮದ್ಯ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ಒಟ್ಟು 40 ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.