ಬಳ್ಳಾರಿ : ವಾಲ್ಮೀಕಿ ನಿಗಮದ ಕೇಸ್ ನಲ್ಲಿ ಜೈಲುಪಾಲಾಗಿ ನಂತರ ಜಾಮೀನಿನ ಮೇಲೆ ಬಿ.ನಾಗೇಂದ್ರ ಹೊರಗಡೆ ಬಂದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನಾಗೇಂದ್ರ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಜೊತೆಯಾಗಿ ಭೇಟಿಯಾಗಿದ್ದರು. ಆ ವೇಳೆ, ನಾಗೇಂದ್ರ ಮತ್ತು ಇನ್ನೋರ್ವ ಸಚಿವ ಸಂತೋಷ್ ಲಾಡ್ ಅವರಿಗೆ ಸಿಎಂ ಕೊಟ್ಟ ಟಾಸ್ಕ್, ಸಂಡೂರಿನಲ್ಲಿ ಸೋಲಬಾರದು ಎನ್ನುವುದು.
ಸಂಡೂರಿನಲ್ಲಿ ಕಾಂಗ್ರೆಸ್ಸಿಗೆ ಜಯ ಅತ್ಯವಶ್ಯಕ, ಇದಕ್ಕೆ ಕಾರಣ ಒಂದು ಇದು ಕಾಂಗ್ರೆಸ್ ಗೆದ್ದಿರುವ ಕ್ಷೇತ್ರ. ಇನ್ನೊಂದು, ಸಂಡೂರಿನ ಬಿಜೆಪಿಯ ಜವಾಬ್ದಾರಿಯನ್ನು ವಹಿಸಿಕೊಂಡವರು ಜನಾರ್ದನ ರೆಡ್ಡಿ. ರೆಡ್ಡಿ ಮತ್ತು ಸಿದ್ದರಾಮಯ್ಯ ನಡುವಿನ ರಾಜಕೀಯ ಸಂಬಂಧಗಳು ಅಷ್ಟಕಷ್ಟೇ..
ತಾನು ಜೈಲು ಪಾಲಾಗಿದ್ದು, ಸ್ವಂತ ಊರಿಗೆ 13 ವರ್ಷಗಳು ಕಾಲು ಇಡಲು ಆಗದೇ ಇದ್ದದ್ದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ಎನ್ನುವುದು ರೆಡ್ಡಿ ಸಿಟ್ಟಿಗೆ ಕಾರಣ. ಅದಕ್ಕೆ, ಜಿದ್ದಿಗೆ ಬಿದ್ದಂತೆ, ಕಾಲಿಗೆ ಚಕ್ರ ಕಟ್ಟಿಕೊಂಡು, ಸಂಡೂರಿನ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಗೆಲುವಿಗೆ, ರೆಡ್ಡಿ ಪಣ ತೊಟ್ಟಿದ್ದಾರೆ.
ಇನ್ನೊಂದು ಕಡೆ, ಕ್ಷೇತ್ರದ ಸೋಲು ಗೆಲುವಿನ ಜವಾಬ್ದಾರಿ ತನ್ನ ಮೇಲೆ ಇರುವುದನ್ನು ಅರಿತಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಅಪ್ಪ ಇಲ್ಲೇ ಸತ್ತಿದ್ದು, ದೊಡ್ಡಪ್ಪ ಇಲ್ಲೇ ಸತ್ತಿದ್ದು, ನಾನೂ ಇಲ್ಲೇ ಸಾಯೋದು ಎನ್ನುವ ಸೆಂಟಿಮೆಂಟ್ ಡೈಲಾಗುಗಳನ್ನು ಹೊಡೆಯುತ್ತಿದ್ದಾರೆ.
ಸತತವಾಗಿ ಮೂರು ದಿನ ಸಿಎಂ ಸಿದ್ದರಾಮಯ್ಯ ಪ್ರವಾಸ
ಎಲ್ಲಕ್ಕಿಂತ ಗಮನಿಸಬೇಕಾದ ವಿಚಾರ ಏನಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸತತವಾಗಿ ಮೂರು ದಿನ ಸಂಡೂರಿನಲ್ಲಿ ಪ್ರವಾಸ ಮಾಡಿ, ಮತಯಾಚನೆ ಮಾಡುತ್ತಿದ್ದಾರೆ. ಗುರುವಾರ ಬೆಳಗ್ಗೆ ಜಿಂದಾಲ್ ಏರ್ ಸ್ಟ್ರಿಪ್ ಗೆ ಆಗಮಿಸಿ, ಪ್ರಚಾರ ಆರಂಭಿಸಿದ ಸಿಎಂ, ಶನಿವಾರ ರಾತ್ರಿಯವರೆಗೆ ಸಂಡೂರಿನಲ್ಲೇ ಪ್ರವಾಸದಲ್ಲಿ ಇರಲಿದ್ದಾರೆ.
ಇತರ ಎರಡು ಕ್ಷೇತ್ರಗಳಿಗಿಂತ ಸಂಡೂರು ಕ್ಷೇತ್ರವನ್ನು ಸೀರಿಯಸ್ಸಾಗಿ ತೆಗೆದುಕೊಂಡಂತಿರುವ ಸಿಎಂ ಸಿದ್ದರಾಮಯ್ಯ, ಶತಾಯಗತಾಯು ಗೆಲ್ಲಲ್ಲೇ ಬೇಕು ಎನ್ನುವ ಫರ್ಮಾನ್ ಅನ್ನು ಸಂತೋಷ್ ಲಾಡ್, ನಾಗೇಂದ್ರ ಮತ್ತು ತುಕರಾಂ ಅವರಿಗೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಅಭ್ಯರ್ಥಿ ಘೋಷಣೆಗೂ ಮುನ್ನವೇ ಜನಾರ್ದನ ಪ್ರಚಾರ
ಇನ್ನೊಂದು ಕಡೆ, ಅಭ್ಯರ್ಥಿ ಘೋಷಣೆಗೂ ಮುನ್ನವೇ ಬಿಜೆಪಿ ಪರ ಪ್ರಚಾರ ಆರಂಭಿಸಿರುವ ಜನಾರ್ಧನ ರೆಡ್ಡಿಯವರಿಗೂ ಈ ಚುನಾವಣೆಯ ಫಲಿತಾಂಶ ನಿರ್ಣಾಯಕ. ಯಾಕೆಂದರೆ, ಇಲ್ಲಿ ಸೋತರೆ ರಾಜ್ಯ ರಾಜಕೀಯದಲ್ಲಿ ಮೂಲೆಗುಂಪಾಗುವ ಸಾಧ್ಯತೆ. ಗೆದ್ದರೆ, ಕೇಂದ್ರ ಮಟ್ಟದಲ್ಲೂ ಬಿರುದು, ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಹೆಚ್ಚಿದೆ.
ಮುಖ್ಯಮಂತ್ರಿಗಳ ಟಿಪಿ ಪ್ರಕಾರ, ಶುಕ್ರವಾರ ಮತ್ತು ಶನಿವಾರ ರಾತ್ರಿ 8.30ರವರೆಗೆ ಸಂಡೂರು ಪ್ರವಾಸದಲ್ಲಿ ಇರಲಿದ್ದಾರೆ. ಆ ಮೂಲಕ, ಸತತವಾಗಿ ಮೂರು ದಿನ ತುಕರಾಂ ಅವರ ಪತ್ನಿ, ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಅನ್ನಪೂರ್ಣ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಸಿದ್ದರಾಮಯ್ಯಗೆ ಉಪಚುನಾವಣೆ ಫಲಿತಾಂಶ ನಿರ್ಣಾಯಕ
ಉಪಚುನಾವಣೆಯ ಫಲಿತಾಂಶ ಕೆಪಿಸಿಸಿ ಅಧ್ಯಕ್ಷರಿಗಿಂತ ಹೆಚ್ಚಾಗಿ, ಸಿದ್ದರಾಮಯ್ಯನವರಿಗೆ ಮುಖ್ಯ. ಅವರ ವಿರುದ್ದದ ಮುಡಾ ಆರೋಪ, ಎಫ್ಐಆರ್ ನಂತರ ಎದುರಾಗುತ್ತಿರುವ ಚುನಾವಣೆ ಇದಾಗಿರುವುದರಿಂದ, ಸೋಲು / ಗೆಲುವು ಇವರ ಮೇಲೆ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು.
ಅಂದು, ಬಳ್ಳಾರಿಗೆ ಬಾ ಎಂದು ಚಾಲೆಂಜ್ ಮಾಡಿದ್ದಕ್ಕೆ, ವಿಧಾನಸೌಧದಲ್ಲೇ ತೊಡೆತಟ್ಟಿ, ಪಾದಯಾತ್ರೆಯ ಮೂಲಕ ಬಳ್ಳಾರಿಗೆ ಆಗಮಿಸಿ, ಜನಾರ್ಧನ ರೆಡ್ಡಿ ವಿರುದ್ದ ಸಿದ್ದರಾಮಯ್ಯ ಗುಡುಗಿದ್ದರು. ಈಗ ಕೂಡಾ ಅಂತದ್ದೇ ಪರಿಸ್ಥಿತಿ, ಆದರೆ ಸನ್ನಿವೇಶ ಮತ್ತು ಪರಿಸ್ಥಿತಿ ಬೇರೆ ಬೇರೆ ಅಷ್ಟೇ..