ಹೈದರಾಬಾದ್: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ತೆಲಂಗಾಣ ಮತ್ತು ಪುದುಚೇರಿ ರಾಜ್ಯಪಾಲರಾದ ತಮಿಳ್ಇಸಯ್ ಸೌಂದರ್ ರಾಜನ್
ರಾಜೀನಾಮೆ ನೀಡಿದ್ದಾರೆ.
ತಮಿಳ್ಇಸಯ್ ಸೌಂದರರಾಜನ್ ಅವರು ದೆಹಲಿಯಲ್ಲಿ ರಾಜೀನಾಮೆ ಸಲ್ಲಿಸಿದರು ಮತ್ತು ಸೋಮವಾರ ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರವನ್ನು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಸ್ವತಃ ಪುದುಚೇರಿ ರಾಜಭವನ ಕೂಡ ತಮಿಳ್ಇಸಯ್ ಸೌಂದರ್ ರಾಜನ್ ಅವರ ರಾಜಿನಾಮೆ ವಿಚಾರವನ್ನು ಸ್ಪಷ್ಟಪಡಿಸಿದೆ.
ಸಕ್ರಿಯ ರಾಜಕಾರಣಕ್ಕೆ ತಮಿಳ್ಇಸಯ್ ಸೌಂದರರಾಜನ್
ಇನ್ನು ಕೆಲವು ದಿನಗಳ ಹಿಂದೆ ತಮಿಳ್ಇಸಯ್ ಸೌಂದರ್ ರಾಜನ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕತ್ವದಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ. ಲೋಕಸಭೆ ಚುನಾವಣೆಗೆ ಬಿಜೆಪಿಯ ಮೂರನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೌಂದರ್ ರಾಜನ್ ಅವರ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅವರು ಉತ್ತರ ತಮಿಳುನಾಡು, ಪುದುಚೇರಿ ಅಥವಾ ಚೆನ್ನೈ ದಕ್ಷಿಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ.
ಅಂದಹಾಗೆ ಪುದುಚೇರಿಯಲ್ಲಿ ಎನ್ಆರ್ ಕಾಂಗ್ರೆಸ್-ಬಿಜೆಪಿ ಮೈತ್ರಿಕೂಟದ ಪರವಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಹಾಗೆಯೇ ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ 39 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.