ರಾಯಚೂರು, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ತೆಲುಗು ನಟ ಪವನ್ ಕಲ್ಯಾಣ್ ಪ್ರಚಾರ ಮಾಡಲಿದ್ದಾರೆ. ಇದರ ಜತೆಗೆ ತೆಲುಗು ಭಾಷಿಕರಿರುವ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿಯೂ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಯಚೂರು ಕ್ಷೇತ್ರದಲ್ಲಿ ಪವನ್ ಕಲ್ಯಾಣ್ ರೋಡ್ ಶೋ ಪವನ್ ಕಲ್ಯಾಣ್ ಮಾಸ್ ಹೀರೋ ಆಗಿದ್ದು, ಸಹೋದರ ಚಿರಂಜೀವಿ ಅವರಂತೆ ಭಾರಿ ಜನಪ್ರಿಯತೆಯುಳ್ಳ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಇವರನ್ನು ರಾಜ್ಯ ಬಿಜೆಪಿ ಚುನಾವಣಾ ಪ್ರಚಾರದ ಅಖಾಡಕ್ಕಿಳಿಸಿದೆ. ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಗಡಿಯಲ್ಲಿರುವ ರಾಯಚೂರಿಗೆ ಏಪ್ರಿಲ್ 17ರಂದು ಪವನ್ ಕಲ್ಯಾಣ್ ಭೇಟಿ ನೀಡಲಿದ್ದು, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಅಂದು ಬೆಳಗ್ಗೆ 11ರಿಂದ 12 ಗಂಟೆವರೆಗೆ ನಗರದ ಗಂಜ್ ವೃತ್ತದಿಂದ ಆರ್ಟಿಒ ಕಚೇರಿವರೆಗೆ ಪವನ್ ಕಲ್ಯಾಣ್ ರೋಡ್ ಶೋ ನಡೆಸಲಿದ್ದಾರೆ.
ಶ್ರೀರಾಮುಲು ಪರ ಪವರ್ ಸ್ಟಾರ್ ಪ್ರಚಾರ
ರಾಯಚೂರು ನಂತರ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರ ಪರ ಪವನ್ ಕಲ್ಯಾಣ್ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಎಪ್ರಿಲ್ 17 ರಂದು ಮಧ್ಯಾಹ್ನ 12:05 ಕ್ಕೆ ಬಳ್ಳಾರಿಗೆ ಆಗಮಿಸಲಿರುವ ಪವನ್ ಕಲ್ಯಾಣ್, ನಗರದ ರಾಯಲ್ ಸರ್ಕಲ್ ಮೂಲಕ ಎಪಿಎಂಸಿ ಮಾರುಕಟ್ಟೆ ವರಗೆ ಭರ್ಜರಿ ರೋಡ್ ಶೋ ಮಾಡಲಿದ್ದಾರೆ. ಬಳ್ಳಾರಿ ನಗರ ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿರುವ ತೆಲುಗು ಭಾಷಿಕರ ಮತಗಳನ್ನು ಸೆಳೆಯಲು ಬಿಜೆಪಿ ಪವನ್ ಕಲ್ಯಾಣ್ ಅವರನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ.
ರಾಜ್ಯದ ರಾಜಕೀಯದಲ್ಲಿ ಸಿನಿ ಪ್ರಪಂಚದ ಖ್ಯಾತನಾಮರನ್ನು ಪ್ರಚಾರಕ್ಕಾಗಿ, ಕೆಲವು ಮತಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನಾಗಿ ಪ್ರಯೋಗ ಮಾಡುತ್ತಿರುವುದು ಇದು ಮೊದಲೇನಲ್ಲ. ಕಳೆದ ಹಲವು ಚುನಾವಣೆಗಳಲ್ಲಿ ಕನ್ನಡ, ತೆಲುಗು ಸ್ಟಾರ್ ನಟ-ನಟಿಯರು ಸಹ ಕೆಲ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ.