ಬೆಂಗಳೂರು: ಇತ್ತೀಚೆಗೆ ಆಸ್ಟ್ರೇಲಿಯಾ ಮುಕ್ತ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ರೋಹನ್ ಬೋಪಣ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹ್ವಾನಿಸಿ ಸನ್ಮಾನಿಸಿ 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಗೂ ರೋಹನ್ ಬೋಪಣ್ಣ ಅವರ ಕುಟುಂಬದವರು ಹಾಜರಿದ್ದರು.
ಕಳೆದ ಜನವರಿ 27ರಂದು ಮೆಲ್ಬೋರ್ನ್ ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಜತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಸೇರಿಕೊಂಡು ಇಟಲಿಯ ಸಿಮೋನ್ ಬೊಲೆಲ್ಲಿ-ಆ್ಯಂಡ್ರಿಯಾ ವಸಸ್ಸೊರಿ ವಿರುದ್ಧ 7-6(7-0), 7-5 ನೇರ ಸೆಟ್ಗಳಿಂದ ಗೆಲುವು ಸಾಧಿಸಿದರು.