ಬೆಂಗಳೂರು: ಬೆಂಗಳೂರಿನಲ್ಲಿ ಎಪಿಎಲ್ ಕಾರ್ಡ್ ಗಳಿಗೆ ನೀಡಲಾಗುವ ಧಾನ್ಯವನ್ನು ಹಠಾತ್ತಾಗಿ ನಿಲ್ಲಿಸಲಾಗಿದೆ. ಒಂದು ಕಡೆ ಬಿಪಿಎಲ್ ಕಾರ್ಡ್ ಗಳ ಮೇಲೆ ಸಮರ ಸಾರುತ್ತಿರುವ ಸರ್ಕಾರ, ನಕಲಿ ಬಿಪಿಎಲ್ ಕಾರ್ಡ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದೆ. ಅದರ ಜೊತೆಯಲ್ಲೇ ಈಗ ಎಪಿಎಲ್ ಕಾರ್ಡ್ ಗಳ ಅಡಿಯಲ್ಲಿ ಸಿಗುತ್ತಿದ್ದ ಧವಸ ಧಾನ್ಯಕ್ಕೂ ಕಲ್ಲು ಹಾಕಿದೆ.
ಎಪಿಎಲ್ ಕಾರ್ಡ್ ದಾರರು, ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ಪಾವತಿ ಮಾಡಿಯೇ ಧಾನ್ಯಗಳನ್ನು ಖರೀದಿಸಬೇಕಿತ್ತು. ಅಕ್ಕಿ ಮಾತ್ರ ಕೊಡಲಾಗುತ್ತಿತ್ತು. ರೇಷನ್ ಕಾರ್ಡ್ ಅನ್ನು ಚಾಲ್ತಿಯಲ್ಲಿಡುವ ಉದ್ದೇಶದಿಂದಲೋ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗುವ ಅಕ್ಕಿಯು ದೋಸೆ, ಇಡ್ಲಿಗೆ ಉತ್ತಮ ಎಂದೆನಿಸಿಯೋ ಎಪಿಎಲ್ ಕಾರ್ಡ್ ದಾರರು, ತಮ್ಮ ಕಾರ್ಡಿಗೆ ಎಷ್ಟು ಕೆಜಿ ಅಕ್ಕಿ ನೀಡುವ ನಿಯಮವಿದೆಯೋ ಅಷ್ಟು ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳಿಂದ ಖರೀದಿಸುತ್ತಿದ್ದರು. ಆದರೀಗ ಆ ಅಕ್ಕಿಯನ್ನು ಸ್ಥಗಿತಗೊಳಿಸಲಾಗಿದೆ.
ಬೆಂಗಳೂರು ಸೇರಿದಂತೆ ಯಾವುದೇ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಎಪಿಎಲ್ ಕಾರ್ಡ್ ಗಳನ್ನು ತೋರಿಸಿದರೆ, “ಈ ಕಾರ್ಡ್ ಗಳಿಗೆ ಏನೂ ಸಿಕ್ಕಲ್ಲ… ಎಲ್ಲವನ್ನೂ ನಿಲ್ಲಿಸಿದ್ದಾರೆ ಎಂಬ ಉತ್ತರ ಕೇಳಿಬರುತ್ತದೆ. ”ಏಕೆ” ಎಂದು ಕೇಳಿದರೆ, “ಅನ್ನಭಾಗ್ಯಕ್ಕೆ ಧಾನ್ಯ ಹೊಂದಿಸಬೇಕಲ್ಲವೇ…, ಇತರ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಲ್ಲವೇ. ಅದಕ್ಕೆ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಬಂದರೆ ಮೊದಲು ಬಿಪಿಎಲ್ ಕಾರ್ಡುದಾರಿರಗೆ ಆದ್ಯತೆಯ ಮೇರೆಗೆ ಕೊಡಬೇಕಿದೆ. ಅದರಲ್ಲಿ ಉಳಿದರೆ ಎಪಿಎಲ್ ಕಾರ್ಡ್ ಗೆ ನೀಡಿ ಎಂದಿದ್ದಾರೆ. ಆದರೆ, ಯಾವುದೇ ಅಕ್ಕಿ ಉಳಿಯಲ್ಲ” ಎಂದು ನ್ಯಾಯಬೆಲೆ ಅಂಗಡಿಯವರು ಹೇಳುತ್ತಾರೆ.
“ಹಾಗಾದರೆ, ಈ ಕಾರ್ಡ್ ಗಳನ್ನು (ಎಪಿಎಲ್) ಕಾರ್ಡ್ ಗಳ ಗತಿಯೇನು” ಎಂದು ಕೇಳಿದಾಗ, “ಸದ್ಯಕ್ಕೆ ಇವುಗಳೀಗ ಅಡ್ರಸ್ ಪ್ರೂಫ್ ಗಾಗಿ ಮಾತ್ರ ಸೀಮಿತ. ಮುಂದೇನಾದರೂ ಹೊಸ ಆದೇಶ ಬಂದರೆ ಈ ಕಾರ್ಡ್ ಗೆ ಏನು ಕೊಡಬೇಕೋ ಅದನ್ನು ಕೊಡ್ತೀವಿ. ಆಗಾಗ ಬಂದು ವಿಚಾರಿಸುತ್ತಿರಿ” ಎಂದು ಹೇಳುತ್ತಾರೆ ನ್ಯಾಯಬೆಲೆ ಅಂಗಡಿಯವರು. “ಚಾಲ್ತಿಯಲ್ಲಿ ಇರದೇ ಇರುವ ಕಾರ್ಡ್ ಗಳು ಒಂದು ವೇಳೆ ರದ್ದಾದರೆ?” ಎಂದು ಕೇಳಿದರೆ, “ಆ ನಿಯಮ ಬಿಪಿಎಲ್ ಕಾರ್ಡ್ ಗಳಿಗೆ ಬಿಡಿ. ಎಪಿಎಲ್ ಕಾರ್ಡ್ ಗಳಿಗೆ ಅನ್ವಯವಾಗಲ್ಲ” ಎಂದು ಹೇಳುತ್ತಿದ್ದಾರೆ.
ಇಂಥದ್ದೇ ಸಮಸ್ಯೆ ಕೆಲವು ದಿನಗಳ ಹಿಂದೆ ಮೈಸೂರಲ್ಲಾಗಿತ್ತು. ಅಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿ ಎಪಿಎಲ್ ಕಾರ್ಡ್ ಗಳಿಗೆ ಅಕ್ಕಿ ನೀಡುವುದು ಯಾವಾಗ ಎಂದು ಸಾರ್ವಜನಿಕರು ಪ್ರತಿಭಟನೆ ಮಾಡಿದ್ದರು. ಈಗ ನೋಡಿದರೆ ಅದೇ ಸಮಸ್ಯೆ ಇಡೀ ರಾಜ್ಯಕ್ಕೇ ವಿಸ್ತರಿಸಿದೆ. ಒಟ್ಟಿನಲ್ಲಿ, ಎಪಿಎಲ್ ಕಾರ್ಡ್ ದಾರರು ತಮ್ಮ ಗುರುತಿನ ಚೀಟಿಗಳಿಗೆ ಫೋಟೋ ಫ್ರೇಮ್ ಹಾಕಿಸಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.