ಕಲಬುರಗಿ: ಸಕಾಲಕ್ಕೆ ವೈದ್ಯರಿಂದ ಚಿಕಿತ್ಸೆ ಸಿಗದ ಕಾರಣ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ತಡರಾತ್ರಿ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಯಲ್ಲಿ ನಡೆದಿದೆ.
ಭಾರತ್ ನಗರ ತಾಂಡಾ ನಿವಾಸಿ ಶಾರದಾಬಾಯಿ (65) ಹಾಗೂ ಉದನೂರ್ ತಾಂಡಾ ನಿವಾಸಿ ದಶರಥ ರಾಠೋಡ್ (50) ಮೃತ ರೋಗಿಗಳು ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ನನ್ನ ತಾಯಿ ಶಾರದಾಬಾಯಿಗೆ ವಿಪರೀತ ವಾಂತಿ–ಭೇದಿ ಆಗುತ್ತಿದ್ದರಿಂದ ಬುಧವಾರ ಜಿಮ್ಸ್ಗೆ ದಾಖಲಿಸಲಾಗಿತ್ತು. ನರ್ಸ್ಗಳು ಹೇಳಿದಂತೆ ರಕ್ತ ತಪಾಸಣೆ, ಬೇರೆ ತಪಾಸಣೆಯ ರಿಪೋರ್ಟ್ಗಳನ್ನು ಸಂಜೆ 4ಕ್ಕೆ ತಂದು ಕೊಟ್ಟರೂ ಅವುಗಳನ್ನು ನೋಡಲಿಲ್ಲ. ಡಾಕ್ಟರ್ ಬರಲಿ ನೋಡುವುದಾಗಿ ಹೇಳಿ ಕಳುಹಿಸಿದರು. ತಪಾಸಣೆ ಮಾಡದೆ ಮೊಬೈಲ್ ನೋಡುವುದರಲ್ಲಿ ನಿರತರಾಗಿದ್ದರು ಎಂದು ಮಗಳು ಸವಿತಾ ದೂರಿದ್ದಾರೆ.
ಗುರುವಾರ ವಾಂತಿ–ಭೇದಿ ಹೆಚ್ಚಾಗಿದ್ದರೂ ಡಾಕ್ಟರ್ ಬಂದು ತಪಾಸಣೆ ಮಾಡಲಿಲ್ಲ. ಸಂಜೆ ವೇಳೆಗೆ ತಾಯಿ ಮೃತಪಟ್ಟರು. ಕೆಲ ಹೊತ್ತಿನ ಬಳಿಕ ಮತ್ತೊಬ್ಬ ರೋಗಿಯೂ ಸಾವನ್ನಪ್ಪಿದ್ದಾರೆ ಎಂದು ದೂರಿದರು.
ಇನ್ನೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ನನ್ನ ಅಣ್ಣನನ್ನು (ದಶರಥ ರಾಠೋಡ್) ಜಿಮ್ಸ್ಗೆ ದಾಖಲಿಸಿದ್ದೆ. ಆರೋಗ್ಯ ಸಮಸ್ಯೆ ಗಂಭೀರವಾಗಿದೆ ಎಂದು ಸಹಿ ತೆಗೆದುಕೊಂಡರು. ಮಧ್ಯಾಹ್ನ ಚಿಕಿತ್ಸೆ ಕೊಟ್ಟು ಹೋದವರು ಮತ್ತೆ ಬರಲಿಲ್ಲ. ಉಸಿರಾಟ ಸಮಸ್ಯೆ ತೀವ್ರವಾಗಿ ನಿಶಕ್ತರಾದರು.
ಸಂಜೆ ವೈದ್ಯರು ಬರುವುದಾಗಿ ಹೇಳಿದರೂ ಬರಲಿಲ್ಲ. ಕೈಗವಸು ಇಲ್ಲ ಎಂದು ನರ್ಸ್ಗಳು ಸಹ ಬರಲಿಲ್ಲ. ಡಾಕ್ಟರ್ ಬಗ್ಗೆ ನರ್ಸ್ಗಳಿಗೆ ಕೇಳಿದರೆ ಈಗ ಬರುತ್ತಾರೆ, ಆಗ ಬರುತ್ತಾರೆ ಎಂದು ಸಬೂಬು ಹೇಳಿದರು. ಕೊನೆಗೆ ನನ್ನ ಅಣ್ಣ ಸಾವನ್ನಪ್ಪಿದರು ಎಂದು ಸಹೋದರ ಮಹಾಂತೇಶ ಆರೋಪಿಸಿದರು.