ಸುವರ್ಣವಾಹಿನಿ ಸುದ್ದಿ
ಹೊಸಪೇಟೆ,ಜ,೨೬: ಸಂವಿಧಾನದ ಮೂಲ ಆಶಯ ಸಾಮಾಜಿಕ ನ್ಯಾಯವಾಗಿದೆ. ನಾವೆಲ್ಲ ಸಂವಿಧಾನದ ಆಶಯ ಈಡೇರಿಸಲು ಪ್ರಾಮಾಣಿಕವಾಗಿ ನಡೆಯುವ ಮೂಲಕ ಅಂಬೇಡ್ಕರ್ ಅವರ ಕನಸು ನನಸು ಮಾಡಬೇಕಾಗಿದೆ ಎಂದು ವಸತಿ, ವಕ್ಫ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಹೇಳಿದರು.
ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ ೨೬ರಂದು ನಡೆದ ೭೫ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ನಮ್ಮ ದೇಶ ಪ್ರಜಾತಂತ್ರ ಗಣತಂತ್ರ ಪ್ರಯೋಗವನ್ನು ಯಶ್ವಸಿಯಾಗಿ ನಡೆಸಿಕೊಂಡು ಬಂದಿದೆ. ಇದಕ್ಕಾಗಿ ಭಾರತದ ಸಂವಿಧಾನ ಶಿಲ್ಪಿ ಮಹಾನ್ ಮಾನವತವಾದಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಲೇಬೇಕು ಎಂದರು.
ದೇಶದ ಇತಿಹಾಸದಲ್ಲೇ ಜನವರಿ ೨೬ ಅತ್ಯಂತ ಮಹತ್ವದ ದಿನವಾಗಿದ್ದು, ದೇಶಕ್ಕೆ ಪ್ರಜಾಪ್ರಭುತ್ವದ ಆಡಳಿತ ಪದ್ದತಿಯನ್ನು ಅಳವಡಿಸಿಕೊಂಡ ಈ ಸಂಭ್ರಮದ ಐತಿಹಾಸಿಕ ದಿನದಂದು ಗಣತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಪ್ರಜಾ ರಾಜ್ಯೋತ್ಸವವನ್ನು ಎತ್ತಿಹಿಡಿದ ಶುಭ ದಿನವಿದು ಎಂದರು.
ಸಾರ್ವಜನಿಕರಲ್ಲಿ ಸಂವಿಧಾನ ಜಾಗೃತಿ: ಸಂವಿಧಾನ ದಿನಾಚರಣೆ ಪ್ರಯುಕ್ತ ಸರ್ಕಾರದ ನಿರ್ದೇಶನದಂತೆ ಸಂವಿಧಾನ ಜಾಗೃತಿ ಜಾಥಾ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಸಮಾವೇಶದ ಸಲುವಾಗಿ ಜ.೨೬ರಂದು ವಿಜಯನಗರ ಜಿಲ್ಲಾ ಕೇಂದ್ರದ ಮೂಲಕ ಸ್ಥಬ್ದಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಈ ಸ್ಥಬ್ದಚಿತ್ರವು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸಂಚರಿಸಲಿದ್ದು ಜಾಥಾವನ್ನು ಅರ್ಥಪೂರ್ಣವಾಗಿ ಬರಮಾಡಿಕೊಳ್ಳಬೇಕು. ಸಂವಿಧಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಹಂಪಿ ಉತ್ಸವ ಯಶಗೊಳಿಸಿ: ಫೆಬ್ರವರಿ ೦೨, ೦೩ ಹಾಗೂ ೦೪ ರಂದು ಹಂಪಿ ಉತ್ಸವವನ್ನು ೪ ವೇದಿಕೆಗಳಲ್ಲಿ ವಿಜೃಂಭಣೆಯಿAದ ಆಚರಿಸಲಾಗುತ್ತಿದ್ದು, ಸ್ಥಳೀಯ ಕಲಾವಿದರು, ಹೊರ ಜಿಲ್ಲೆಯ ಕಲಾವಿದರು, ಚಿತ್ರರಂಗದ ಪ್ರಮುಖರೆಲ್ಲರೂ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಜಯನಗರ ಜಿಲ್ಲೆಯ ಎಲ್ಲಾ ನಾಗರಿಕರೆಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರುತ್ತೇನೆ ಎಂದು ಸಚಿವರು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ರಾಜ್ಯ ಸರ್ಕಾರದ ಯೋಜನೆಗಳ ಮೂಲಕ ಪ್ರಗತಿಯತ್ತ ಸಾಗಲು ವಿಜಯನಗರ ಜಿಲ್ಲೆಯ ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಿ ಈ ಜಿಲ್ಲೆಯನ್ನು ಅಭಿವೃದ್ದಿಯತ್ತ ಕೊಂಡೋಯ್ಯಲು ಸಂಕಲ್ಪ ಮಾಡೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಕುಮಾರಿ ಎ. ಲತಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ನವೀನರಾಜ್ ಸಿಂಗ್, ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ. ಹಾಗೂ ಇನ್ನೀತರರು ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವ ಪದ್ಮಶ್ರೀ ಪುರಷ್ಕೃತರಾದ ಮಾತಾ ಮಂಜಮ್ಮ ಜೋಗತಿ ಅವರನ್ನು ಇದೆ ವೇಳೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾನಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.