ಹೊಸಪೇಟೆ (ವಿಜಯನಗರ) ಫೆಬ್ರವರಿ 02 : ಹಂಪಿ ಉತ್ಸವದಲ್ಲಿ ಫೆಬ್ರವರಿ 2ರಂದು ಉದ್ಘಾಟನೆಗೊಂಡಿರುವ ಮತ್ಸ್ಯ ಮೇಳವು ವಿಶೇಷ ಆಕರ್ಷಣೆಯನ್ನು ಹೊಂದಿದ್ದು, ಜನಸಾಮಾನ್ಯರನ್ನು ಕೈ ಬೀಸಿ ಕರೆಯುತ್ತಿವೆ.
ಹಂಪಿ ಉತ್ಸವ-2024ರ ಅಂಗವಾಗಿ ಜಿಲ್ಲಾಡಳಿತ ಹಾಗೂ ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ಫೆ.2 ರಿಂದ 4ರವರೆಗೆ ಮಾತಂಗ ಪರ್ವತ ಮೈದಾನದಲ್ಲಿ ಹಮ್ಮಿಕೊಂಡಿರುವ ಈ ಮತ್ಸö್ಯ ಮೇಳಕ್ಕೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯನಗರ ಶಾಸಕರಾದ ಹೆಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಸೇರಿದಂತೆ ಜನಪ್ರತಿನಿಧಿಗಳು, ಹಲವು ಗಣ್ಯರು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.
ಈ ಮೇಳದಲ್ಲಿ ವಿಶಿಷ್ಟ ಹಾಗೂ ಅಪರೂಪದ ಮೀನುಗಳು, ಬಣ್ಣದ ಅಲಂಕಾರಿಕ ಮೀನುಗಳು ಸೇರಿದಂತೆ 65 ವಿವಿಧ ಬಗೆಯ ಮೀನುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಪ್ರಮುಖವಾಗಿ ಮೀನು ಪ್ರದರ್ಶನದಲ್ಲಿ ಬರಾಕುಡಾ, ಟೈಗರ್, ಬಟರ್ಫಿಶ್, ಹೆರಿಂಗ್, ಸ್ಕಾö್ಯಡ್, ಪರ್ಲ್ಸ್ ಸ್ಟಾಟ್, ವೈಟಿಂಗ್, ಯೆಲ್ಲೊಫಿನ್ ಹಾಗೂ ಇತರೆ ಜಾತಿಯ ವಿವಿಧ ಬಗೆಯ ಮೀನುಗಳು ಈ ಮೇಳದ ಕೇಂದ್ರ ಬಿಂದುಗಳಾಗಿವೆ. ಮೀನು ಪ್ರಿಯರು ವಿವಿಧ ಜಾತಿಯ ಬಣ್ಣದ ಮೀನುಗಳನ್ನು ನೋಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ವಿಡಿಯೋ ತೆಗೆದು ಸಂಭ್ರಮಿಸಿದರು.
ಸಾರ್ವಜನಿಕರಿಗೆ ಮೀನಿನ ಆಹಾರ ಮತ್ತು ಮೀನು ಕೃಷಿಗೆ ಬೇಕಾಗುವ ಇನ್ನಿತರ ವಸ್ತುಗಳ ವಿವರಣೆ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ಸಹ ಈ ಮೇಳದಲ್ಲಿ ನೀಡಲಾಗುತ್ತದೆ.