ಸಭೆಯಲ್ಲಿ ಹಲವು ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಹೇಳಿದ್ದಾರೆ. ಪಂಜಾಬ್ನ ರೈತರು ತುಂಬಾ ತೊಂದರೆಗೀಡಾಗಿದ್ದಾರೆ. ಆದ್ದರಿಂದ, ರಾಜ್ಯದ ಮುಖ್ಯಸ್ಥನಾಗಿ, ಈ ಸಭೆಯಲ್ಲಿ ಅವರ ಪರವಾಗಿ ವಾದ ಮಂಡಿಸುವುದು ನನ್ನ ಕರ್ತವ್ಯವಾಗಿತ್ತು. ಸಭೆಯಲ್ಲಿ ಎಲ್ಲ ವಿಷಯಗಳ ಬಗ್ಗೆ ಸಕಾರಾತ್ಮಕ ಚರ್ಚೆಗಳು ನಡೆದವು. ನಾವು ಸಭೆಯಲ್ಲಿ ಪಂಜಾಬ್ ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ, ವಿಶೇಷವಾಗಿ ನಮ್ಮ ಮೂರು ಜಿಲ್ಲೆಗಳಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾವು ಪ್ರಶ್ನಿಸಿದ್ದೇವೆ. ಮಕ್ಕಳಿಗೆ ಪರೀಕ್ಷೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಅವರು ಆನ್ಲೈನ್ನಲ್ಲಿ ಅಧ್ಯಯನ ಮಾಡಲು ಕಷ್ಟಪಡುತ್ತಿದ್ದಾರೆ. ರೈತರು ಗಡಿಯಲ್ಲಿ ಕುಳಿತಿದ್ದಾರೆ, ಹಾಗಾದರೆ ನಮ್ಮ ಪ್ರದೇಶಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸುವ ಅವಶ್ಯಕತೆ ಏನಿತ್ತು? ಎಂದು ನಾವು ಸಭೆಯಲ್ಲಿ ಕೇಳಿದ್ದೇವೆ ಎಂದು ಮಾನ್ ಹೇಳಿದ್ದಾರೆ.
ಎಂಎಸ್ಪಿ, ನಕಲಿ ಬೀಜಗಳು ಮತ್ತು ಕೀಟನಾಶಕಗಳನ್ನು ಮಾರಾಟ ವಿಚಾರ
ಲಖೀಂಪುರ ಖೇರಿಯ ಗಾಯಾಳುಗಳಿಗೆ ಪರಿಹಾರ, ರೈತರ ವಿರುದ್ಧ ದಾಖಲಾದ ಪ್ರಕರಣಗಳು ಮತ್ತು ಎಂಎಸ್ಪಿ ಸೇರಿದಂತೆ ಇತರ ಎಲ್ಲ ವಿಷಯಗಳ ಬಗ್ಗೆ ಸಕಾರಾತ್ಮಕ ಚರ್ಚೆ ನಡೆದಿದೆ ಎಂದು ಮಾನ್ ಹೇಳಿದ್ದಾರೆ. ನಾನು ಪಂಜಾಬ್ನಲ್ಲಿ ನಕಲಿ ಬೀಜಗಳು ಮತ್ತು ಕೀಟನಾಶಕಗಳ ಮಾರಾಟದ ವಿಷಯವನ್ನು ಪ್ರಸ್ತಾಪಿಸಿದೆ. ಹಲವು ವರ್ಷಗಳ ಹಿಂದೆ ವಿದೇಶದಲ್ಲಿ ನಿಷೇಧಕ್ಕೊಳಗಾದ ಔಷಧಗಳು ಈಗಲೂ ಪಂಜಾಬ್ನಲ್ಲಿ ಮಾರಾಟವಾಗುತ್ತಿವೆ. ನಾವು ವಿತರಕರನ್ನು ಹಿಡಿಯುತ್ತೇವೆ ಆದರೆ ಔಷಧ ತಯಾರಕರು ಕಾನೂನಿನಿಂದ ದೂರವಿರುತ್ತಾರೆ ಎಂದು ಮಾನ್ ಕೇಂದ್ರ ಸಚಿವರ ಜತೆಗಿನ ಸಭೆಯಲ್ಲಿ ಹೇಳಿದ್ದಾರೆ.
ನಮಗೆ ಪರಿಹಾರ ಬೇಕು, ಮುಖಾಮುಖಿ ಅಲ್ಲ
ಮಧ್ಯರಾತ್ರಿ 1.30 ರವರೆಗೆ ಆರು ಗಂಟೆಗಳ ಕಾಲ ನಡೆದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾದ ನಾಯಕ ಸರ್ವಾನ್ ಸಿಂಗ್ ಪಂಧೇರ್, “ಸಭೆಯಲ್ಲಿ ನಾವು ಸಂವಾದಕ್ಕೆ ನಮ್ಮ ಬದ್ಧತೆಯನ್ನು ನೀಡಿದ್ದೇವೆ ಆದರೆ ನಮ್ಮ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸ್ ಬಲಪ್ರಯೋಗದ ವಿರುದ್ಧ ತೀವ್ರವಾಗಿ ಆಕ್ಷೇಪಿಸಿದ್ದೇವೆ. ನಾವು ಪಾಕಿಸ್ತಾನದವರಲ್ಲ ನಮಗೆ ಪರಿಹಾರ ಬೇಕು, ಮುಖಾಮುಖಿ ಅಲ್ಲ ಎಂದು ಕೇಂದ್ರ ಸಚಿವರಿಗೆ ಹೇಳಿದ್ದೇವೆ.
ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ಸಂಚಾಲಕ ಜಗಜಿತ್ ಸಿಂಗ್ ದಲ್ಲೆವಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ದೆಹಲಿಗೆ ಮೆರವಣಿಗೆ ಮಾಡಲು ಸಂಪೂರ್ಣವಾಗಿ ನಿರ್ಧರಿಸಿದ್ದರೆ, ಭಾನುವಾರದ ಸಭೆಯ ಫಲಿತಾಂಶಕ್ಕಾಗಿ ಅವರು ಕಾಯುತ್ತಾರೆ.
“ಆ ದಿನ ಮಾತುಕತೆ ವಿಫಲವಾದರೆ, ನಾವು ಮುಂದುವರಿಯುತ್ತೇವೆ. ಆದರೆ ಅಲ್ಲಿಯವರೆಗೆ ನಾವು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತೇವೆ. ಭದ್ರತಾ ಪಡೆಗಳು ಸಂಯಮವನ್ನು ಅಳವಡಿಸಿಕೊಳ್ಳಬೇಕೆಂದು ನಿರೀಕ್ಷಿಸುತ್ತೇವೆ . ನಮ್ಮ ರೈತರು ಕ್ಯಾಂಪ್ ಮಾಡುತ್ತಿರುವ ಶಂಭು ತಡೆಗೋಡೆಯಲ್ಲಿ ಯಾವುದೇ ಶೆಲ್ ದಾಳಿ ನಡೆಯಬಾರದು ಎಂದಿದ್ದಾರೆ.