ರಾಜ್ಕೋಟ್(ಫೆ.15): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಪಾಳಯದಲ್ಲಿ ಒಂದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು. ದೇಶಿ ಕ್ರಿಕೆಟ್ನಲ್ಲಿ ರನ್ ರಾಶಿಯನ್ನೇ ಗುಡ್ಡೆ ಟೀಂ ಇಂಡಿಯಾ ಬಾಗಿಲು ತಟ್ಟುತ್ತಿದ್ದ 26 ವರ್ಷದ ಪ್ರತಿಭಾನ್ವಿತ ಬ್ಯಾಟರ್ ಸರ್ಫರಾಜ್ ಖಾನ್ ಕೊನೆಗೂ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜತೆಗೆ ವಿಕೆಟ್ ಕೀಪರ್ ಬ್ಯಾಟರ್ ಧೃವ್ ಜುರೆಲ್ ಕೂಡಾ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಟಾಸ್ಗೂ ಮುನ್ನ ಭಾರತದ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ, ಟೆಸ್ಟ್ ಕ್ಯಾಪ್ ನೀಡಿ ಭಾರತ ಟೆಸ್ಟ್ ತಂಡಕ್ಕೆ ಸ್ವಾಗತಿಸಿದರು. ಟೆಸ್ಟ್ ಕ್ಯಾಪ್ ನೀಡುವ ಮುನ್ನ ಅನಿಲ್ ಕುಂಬ್ಳೆ, “ಈ ಹಂತಕ್ಕೆ ಬರಲು ನೀವು ಹಾಗೂ ನಿಮ್ಮ ಕುಟುಂಬದ ಪರಿಶ್ರಮ ಅನನ್ಯವಾದದ್ದು, ನಿಮ್ಮ ತಂದೆ ನಿಮ್ಮ ಸಾಧನೆಯ ಬಗ್ಗೆ ಖಂಡಿತವಾಗಿಯೂ ಹೆಮ್ಮೆ ಪಡುತ್ತಿದ್ದಾರೆ. ದೇಶಿ ಕ್ರಿಕೆಟ್ನಲ್ಲಿ ನೀವು ಸಾಕಷ್ಟು ರನ್ ಗಳಿಸಿದ ಹೊರತಾಗಿಯೂ ನಿಮಗೆ ನಿರಾಸೆಯಾಗಿರಬಹುದು. ಆದರೆ ಒಂದಂತೂ ಖಚಿತವಾಗಿ ಹೇಳುತ್ತೇನೆ, ಇಂದು ನಿಮ್ಮ ಪಾಲಿಗೆ ಅವಿಸ್ಮರಣೀಯವಾದ ದಿನವಾಗಿರಲಿದೆ ಹಾಗೂ ದೀರ್ಘಕಾಲದ ವೃತ್ತಿಜೀವನ ನಿಮ್ಮದಾಗಲಿ” ಎಂದು ಶುಭಹಾರೈಸಿದರು.
ಅನಿಲ್ ಕುಂಬ್ಳೆ ಈ ರೀತಿ ಶುಭ ಹಾರೈಸುತ್ತಿದ್ದಾಗಲೇ ಸರ್ಫರಾಜ್ ಖಾನ್ ಅವರ ತಂದೆ ಹಾಗೂ ಪತ್ನಿ ಹತ್ತಿರದಲ್ಲೇ ನಿಂತು ಈ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡರು. ಸರ್ಫರಾಜ್ ಖಾನ್ ಟೆಸ್ಟ್ ಕ್ಯಾಪ್ ಸ್ವೀಕರಿಸುತ್ತಿದ್ದಂತೆಯೇ ಪೋಷಕರು ಆನಂದಭಾಷ್ಪ ಸುರಿಸಿದರು. ಸರ್ಫರಾಜ್ ತಂದೆ ನೌಶಾದ್ ಖಾನ್, ಮಗನನ್ನು ಬಿಗಿದಪ್ಪಿ, ಟೆಸ್ಟ್ ಕ್ಯಾಪ್ಗೆ ಮುತ್ತಿಕ್ಕಿದರು. ಸರ್ಫರಾಜ್ ಖಾನ್ ಪತ್ನಿಯ ಪ್ರೀತಿಯ ಕಣ್ಣೀರನ್ನು ಒರೆಸಿದರು. ಇದೊಂದು ಭಾವನಾತ್ಮಕ ಕ್ಷಣವೆನಿಸಿದ್ದು, ಸರ್ಫರಾಜ್ ಪೋಷಕರ ಮುಖದಲ್ಲಿ ಒಂದು ರೀತಿ ಸಾರ್ಥಕತೆಯ ಭಾವ ತುಂಬಿ ತುಳುಕುತ್ತಿತ್ತು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಇನ್ನು ರಾಜ್ಕೋಟ್ ಟೆಸ್ಟ್ ಪಂದ್ಯದ ಬಗೆಗೆ ಹೇಳುವುದಾದರೇ, ಇಂಗ್ಲೆಂಡ್ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಮಾರ್ಕ್ ವುಡ್ ಮಾರಕ ದಾಳಿಗೆ ಟೀಂ ಇಂಡಿಯಾ ಆರಂಭದಲ್ಲೇ ತತ್ತರಿಸಿ ಹೋಯಿತು. ಟೀಂ ಇಂಡಿಯಾ 33 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡು ಕಂಗಾಲಾಗಿತ್ತು. ಆದರೆ ನಾಲ್ಕನೇ ವಿಕೆಟ್ಗೆ ನಾಯಕ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಸಮಯೋಚಿತ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಸದ್ಯ 41 ಓವರ್ ಅಂತ್ಯದ ವೇಳೆಗೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 143 ರನ್ ಬಾರಿಸಿದ್ದು, ಮುರಿಯದ 110 ರನ್ಗಳ ಜತೆಯಾಟ ನಿಭಾಯಿಸಿದ್ದಾರೆ. ರೋಹಿತ್ ಶರ್ಮಾ 77 ಹಾಗೂ ರವೀಂದ್ರ ಜಡೇಜಾ 47 ರನ್ ಗಳಿಸಿ ಮುನ್ನುಗ್ಗುತ್ತಿದ್ದಾರೆ.