ಎಲ್ಲೋರಾದ ದೇವಾಲಯಗಳು ಸೊಗಸಾದ ಕರಕುಶಲತೆಗೆ ಉದಾಹರಣೆಗಳಾಗಿದ್ದರೂ, ಇಲ್ಲಿರುವ 16 ರ ಗುಹೆ ವಿಶ್ವದ ಅತಿದೊಡ್ಡ ಏಕಶಿಲಾ ದೇವಾಲಯವಾಗಿದೆ. ಈ ಕೈಲಾಸ ಅಥವಾ ಕೈಲಾಸನಾಥ ದೇವಾಲಯವು ಶಿವನಿಗೆ ಸಮರ್ಪಿತವಾದ ರಥಾಕಾರದ ಸ್ಮಾರಕವನ್ನು ಹೊಂದಿದೆ. ಅಲ್ಲದೆ ಈ ದೇಗುಲವು 164 ಅಡಿ ಆಳ, 109 ಅಡಿ ಅಗಲ ಮತ್ತು 98 ಅಡಿ ಎತ್ತರ ಇರುವ ಒಂದೇ ಬಂಡೆಯಿಂದ ನಿರ್ಮಿಸಲಾಗಿದೆ.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಎಲ್ಲೋರಾ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಇದು 100 ಕ್ಕೂ ಹೆಚ್ಚು ಗುಹೆಗಳ ನೆಲೆಯಾಗಿದೆ, ಅದರಲ್ಲಿ 34 ಗುಹೆಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. ಈ ಗುಹೆಯ ಸಂಕೀರ್ಣವನ್ನು ಚರಣಾಂದ್ರಿ ಬೆಟ್ಟಗಳ ಘನ ಬಂಡೆಗಳಿಂದ ಕತ್ತರಿಸಲಾಗಿದೆ. ಅಲ್ಲದೆ ಎಲ್ಲೋರಾ ಸಂಕೀರ್ಣವು 12 ಬೌದ್ಧ, 17 ಹಿಂದೂ ಮತ್ತು 5 ಜೈನ ಗುಹೆಗಳನ್ನು ಒಳಗೊಂಡಿದೆ. 1 ರಿಂದ 12 ರ ಗುಹೆಗಳು ಬೌದ್ಧ ಮಠಗಳು, ಚೈತರು ಮತ್ತು ವಿಹಾರಗಳು, 13 ರಿಂದ 29 ಗುಹೆಗಳು ಹಿಂದೂ ದೇವಾಲಯಗಳಾಗಿವೆ. 30 ರಿಂದ 34ರ ಗುಹೆಗಳು ಜೈನ ದೇವಾಲಯಗಳಾಗಿವೆ. ಮೂರು ವಿಭಿನ್ನ ಧರ್ಮಗಳ ರಚನೆಗಳು ಭಾರತದ ಪ್ರಚಲಿತ ಧಾರ್ಮಿಕ ಸಹಿಷ್ಣುತೆಯ ಅದ್ಭುತ ದೃಶ್ಯ ನಿರೂಪಣೆಯಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲೋರಾದಲ್ಲಿನ ಹಿಂದೂ ಮತ್ತು ಬೌದ್ಧ ಗುಹೆಗಳನ್ನು ರಾಷ್ಟ್ರಕೂಟ ರಾಜವಂಶದ (ಸಾ.ಶ. 753-982) ಅವಧಿಯಲ್ಲಿ ನಿರ್ಮಿಸಲಾಯಿತು ಮತ್ತು 1187 ರಿಂದ 1317 ರವರೆಗೆ ಆಳಿದ ಯಾದವ ರಾಜವಂಶವು ಹೆಚ್ಚಿನ ಜೈನ ಗುಹೆಗಳನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ.
ಕೈಲಾಸನಾಥ ದೇವಾಲಯದ ವಿಶೇಷತೆ!
ಇವೆಲ್ಲವೂ ಸೊಗಸಾದ ಕರಕುಶಲತೆಗೆ ಉದಾಹರಣೆಗಳಾಗಿದ್ದರೂ, ಇಲ್ಲಿರುವ 16ರ ಗುಹೆ ವಿಶ್ವದ ಅತಿದೊಡ್ಡ ಏಕಶಿಲಾ ದೇವಾಲಯವಾಗಿದೆ. ಈ ಕೈಲಾಸ ಅಥವಾ ಕೈಲಾಸನಾಥ ದೇವಾಲಯವು ಶಿವನಿಗೆ ಸಮರ್ಪಿತವಾದ ರಥಾಕಾರದ ಸ್ಮಾರಕವನ್ನು ಹೊಂದಿದೆ. ಈ ದೇಗುಲವು 164 ಅಡಿ ಆಳ, 109 ಅಡಿ ಅಗಲ ಮತ್ತು 98 ಅಡಿ ಎತ್ತರ ಇರುವ ಒಂದೇ ಬಂಡೆಯಿಂದ ನಿರ್ಮಿಸಲಾಗಿದೆ. ಅದರ ಗಾತ್ರದ ಹೊರತಾಗಿ, ಕಲ್ಲಿನಿಂದ ಕೆತ್ತಲಾದ ಗುಹಾ ದೇವಾಲಯವು ಅದರ ವಿವರವಾದ ವಾಸ್ತುಶಿಲ್ಪ, ಹಿಂದೂ ದೇವತೆಗಳ ಶಿಲ್ಪಗಳು ಮತ್ತು ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಸಂಕ್ಷಿಪ್ತಗೊಳಿಸುವ ಫಲಕಗಳನ್ನು ಒಳಗೊಂಡಿದೆ. ಅಲ್ಲದೆ ಈ ದೇವಾಲಯವು ಭಾರತೀಯ ವಾಸ್ತುಶಿಲ್ಪದ ಗತವೈಭವವನ್ನು ಸಾರುತ್ತದೆ. ಜೊತೆಗೆ ದ್ರಾವಿಡ ಕಲೆಯ ಉತ್ಕೃಷ್ಟತೆಗೆ ಸಾಕ್ಷಿಯಾಗಿದೆ. ಕೈಲಾಶ್ ಅಥವಾ ಕೈಲಾಸ ದೇವಾಲಯವು ಒಂದು ಅದ್ಭುತವಾದ ವಾಸ್ತುಶಿಲ್ಪವಾಗಿದ್ದು, ಇದನ್ನು ರಾಷ್ಟ್ರಕೂಟ ರಾಜ ಕೃಷ್ಣ I (756-773) ಪ್ರಾರಂಭಿಸಿದನೆಂದು ನಂಬಲಾಗಿದೆ.