ಬಳ್ಳಾರಿ,ಏ 12; ಲೋಕಸಭಾ ಚುನಾವಣೆಯ ಉಮೇದುವಾರಿಕೆ ಸಲ್ಲಿಸಲು ಇಂದಿನಿಂದ ಆರಂಭವಾಗಿದ್ದು, ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳು ಪೈಪೋಟಿಗೆ ಬಿದ್ದವರಂತೆ ಬೃಹತ್ ಮೆರವಣಿಗೆಗಳ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ಬಂದು ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಸಂಡೂರಿನ ಶಾಸಕ ಇ.ತುಕಾರಾಂ ತಮ್ಮ ಉಮೇದುವಾರಿಕೆ ಸಲ್ಲಿಸುವ ಮುನ್ನ ನಗರದ ಅಧಿದೇವತೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದ ತುಕಾರಾಂ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಬಿ.ನಾಗೇಂದ್ರ, ಬಿ.ಝಡ್. ಜಮೀರ್ ಅಹ್ಮದ್ ಖಾನ್, ಅಲ್ಲಂ ವೀರಭದ್ರಪ್ಪ ಶಾಸಕರಾದ ನಾರಾ ಭರತ್ ರೆಡ್ಡಿ, ಜೆ.ಎನ್.ಗಣೇಶ್.,ಡಾ.ಎನ್.ಟಿ.ಶ್ರೀನಿವಾಸ್, ಭೀಮ ನಾಯಕ್, ಪಿಟಿ ಪರಮೇಶ್ವರ್ ನಾಯಕ್, ಅಲ್ಲಂ ಪ್ರಶಾಂತ್, ಮಹಾನಗರ ಪಾಲಿಕೆ ಸದಸ್ಯರು ಸಾಥ್ ನೀಡಿದರು.
ಕನಕ ದುರ್ಗಮ ದೇವಸ್ಥಾನದ ಆವರಣದಿಂದ ತೆರೆದ ವಾಹನದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಕನಕ ದುರ್ಗಮ್ಮ ದೇವಸ್ಥಾನದಿಂದ ಮೆರವಣಿಗೆ ಹೊರಟು ಅಂಡರ್ ಬ್ರಿಡ್ಜ್ ಮೂಲಕ ಡಬಲ್ ರಸ್ತೆ ರಾಯಲ್ ವೃತ್ತೆ ಅಲ್ಲಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾರವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಇನ್ನು ಮೆರವಣಿಗೆಯ ಉದ್ದಗಲಕ್ಕೂ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಜೈಕಾರಗಳನ್ನು ಕೂಗುತ್ತಾ ಸಾಗಿದರು.