ಬಳ್ಳಾರಿ.ಫೆ.25: ನಗರ ವ್ಯಾಪ್ತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಬಳ್ಳಾರಿ ವತಿಯಿಂದ ಲಿಂ. ಸಿರಿಗೇರಿ ಬಸವರಾಜ್ ಸ್ಮಾರಕ ದತ್ತಿ ಮತ್ತು ಪಟೇಲ್ ಬಸವರಾಜ್ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಭೆಯನ್ನು ಉದ್ದೇಶಿಸಿ ವಿಸ್ತಾರ ನ್ಯೂಸ್ ವೀಭಾಗೀಯ ಮುಖ್ಯಸ್ಥರಾದ ಶಶಿಧರ ಮೇಟಿಯವರು ಕನ್ನಡ ಶಾಲೆಯಲ್ಲಿ ಓದಿದವರು ಇಂದು ದೊಡ್ಡ ದೊಡ್ಡ ಹಂತದಲ್ಲಿದ್ದಾರೆ. ಹಾಗಾಗಿ ಯಾರೂ ಕನ್ನಡವನ್ನು ಅಲಕ್ಷ್ಯ ಮಾಡಕೂಡದು. ನಮಗೆಲ್ಲಾ ಅನ್ನ ನೀಡುತ್ತಿರುವ ಕನ್ನಡಕ್ಕೆ ಪ್ರತಿಯೊಬ್ಬರು ಋಣಿಯಾಗಿರಬೇಕು ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಮಾಜ ಸೇವಕರಾದ ಜೋಳದರಾಶಿ ತಿಮ್ಮಪ್ಪ ಅವರು ಮಾತನಾಡುತ್ತಾ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೆ ಕೊರಗಬಾರದು. ದೇಶಕ್ಕೆ ಕೊಡುಗೆ ನೀಡುವ ನಿಜವಾದ ಪ್ರತಿಭೆಗಳು ಇಲ್ಲಿಯೇ ಇರುತ್ತಾರೆ. ಅವರ ಭವಿಷ್ಯ ಉಜ್ವಲವಾಗಿರಬೇಕು. ಅದಕ್ಕಾಗಿ ನಾವೆಲ್ಲರೂ ನಮ್ಮ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಟಿಬದ್ಧರಾಗಿರಬೇಕು ಎಂದು ಅವರು ಹೇಳಿದರು. ಅವರು ಈ ಸಂದರ್ಭದಲ್ಲಿ ssಟಛಿ ಮಕ್ಕಳಿಗೆ ಪರೀಕ್ಷಾ ಪ್ಯಾಡ್, ಪೆನ್ ಗಳನ್ನು ವಿತರಿಸದರು. ಇದೇ ಸಂದರ್ಭದಲ್ಲಿ ಶಿಕ್ಷಕರಾದ ಕು.ಭಾರತಿ ಪುರುಷೋತ್ತಮ ಹಂದ್ಯಾಳ್ ಅವರು ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ರಂಗಕರ್ಮಿಗಳಾದ ಪುರುಷೋತ್ತಮ ಹಂದ್ಯಾಳ್ ಮಾತನಾಡುತ್ತಾ ಹಂದಿಹಾಳು ಗ್ರಾಮ ಸುಕ್ಷೇತ್ರ ಈ ನೆಲದಲ್ಲಿ ಪವಾಡ ಪುರುಷರಾದ ಎಮ್ಮಿಗನೂರು ಜಡಸಿದ್ದೇಶ್ವರ ಶಿವಯೋಗಿಗಳು, ಮೆಟ್ರಿ ಮಹಾದೇವ ತಾತನವರು ಹಾಗೂ ಪ್ರಸಿದ್ಧ ತತ್ವಪದಕಾರರಾದ ಶಿಲಿವೇರಿ ಶಿವಪ್ಪ ತಾತನವರು ನಡೆದಾಡಿದ್ದಾರೆ. ಇಂಥವರು ಸವೆಸಿದ ಹಾದಿಯಲ್ಲಿ ನಾವೆಲ್ಲಾ ಸಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ.ರವಿಚಂದ್ರ, ಮುಖ್ಯಗುರುಗಳಾದ ಡಾ. ಕೆ.ಶಿವಲಿಂಗಪ್ಪ ಹಂದಿಹಾಳು, ಪ್ರೌಢಶಾಲಾ ವಿಭಾಗದ ಮುಖ್ಯ ಗುರುಗಳಾದ ಶ್ರೀಮತಿ ಕವಿತ.ವೈ ಹಾಗೂ ಉದಯವಾಣಿ ಜಿಲ್ಲಾ ವರದಿಗಾರರಾದ ವೆಂಕೋಬಿಯವರು, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ನಾಹಿದಾ ಅಂಜುಮ್ ನಿರೂಪಿಸಿದರು. ಸ್ವಾಗತ ಪ್ರಾಸ್ತಾವಿಕ ನುಡಿಯನ್ನು ಕೆ.ಶಿವಲಿಂಗಪ್ಪ ನುಡಿದರೆ, ವಂದನೆಯನ್ನು ಶಿಕ್ಷಕಿ ಜಿ.ಆರ್. ಸುಮಲತಾ ನೆರವೇರಿಸಿದರು.