ಬಾಗಲಕೋಟೆ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರನ್ನ ಶುಗರ್ ಫ್ಯಾಕ್ಟರಿ ಭಾರಿ ಅಕ್ರಮದ ಆರೋಪದಿಂದ ಮತ್ತೆ ಸುದ್ದಿಯಲ್ಲಿದೆ. ಸರ್ಕಾರದ ಹಣ ಮತ್ತು ರೈತರ ಬೊಕ್ಕಸಕ್ಕೆ ನೇರ ನಷ್ಟ ಉಂಟುಮಾಡಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಚಿವರಾದ ಶಿವಾನಂದ ಪಾಟೀಲ್, ಆರ್.ವಿ. ತಿಮ್ಮಾಪುರ, ಮಾಜಿ ಸಚಿವ ಎಸ್.ಆರ್. ಪಾಟೀಲ್ ಹಾಗೂ ಹಲವು ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಫ್ಯಾಕ್ಟರಿಯ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳ ಪರಿಣಾಮವಾಗಿ 363 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ನಡೆದಿದೆ ಎಂಬ ಗಂಭೀರ ಆರೋಪ ಹೊರಬಿದ್ದಿದೆ. ಬಾಗಲಕೋಟೆಯ ರೈತ ಹಾಗೂ ಫ್ಯಾಕ್ಟರಿಯ ಸದಸ್ಯರಾದ ಸಿದ್ದಾರೂಡ ಕಂಬಳಿ ಅವರು ಲೋಕಾಯುಕ್ತಕ್ಕೆ ಸಲ್ಲಿಸಿದ ದೂರುದಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.
ಟೆಂಡರ್ ಪ್ರಕ್ರಿಯೆಯಲ್ಲೇ ಅಕ್ರಮ?
ಮಾಜಿ ಸಚಿವ ಎಸ್.ಆರ್. ಪಾಟೀಲ್ ಅವರು ಮೊದಲಿಗೆ ಫ್ಯಾಕ್ಟರಿಯನ್ನು 471 ಕೋಟಿ ರೂ. ಮೌಲ್ಯದ ಟೆಂಡರ್ ಮೂಲಕ ತೆಗೆದುಕೊಂಡಿದ್ದರು. ಆದರೆ ಕೆಲವೇ ತಿಂಗಳ ನಂತರ, ಅದೇ ಫ್ಯಾಕ್ಟರಿಯನ್ನು ಕೇವಲ 108 ಕೋಟಿ ರೂ. ಮೌಲ್ಯಕ್ಕೆ ಮರು ಟೆಂಡರ್ ಮೂಲಕ ಪಡೆದಿದ್ದಾರೆ ಎಂಬುದು ದೂರುದಾರರ ಆರೋಪ. ಈ ರೀತಿಯ ಕ್ರಮವು ಕಾನೂನು ನಿಯಮ ಉಲ್ಲಂಘನೆಯಾಗಿದ್ದು, ಸರ್ಕಾರ ಮತ್ತು ರೈತರಿಗೆ ಭಾರಿ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಚಿವರು ಮತ್ತು ಅಧಿಕಾರಿಗಳ ಪಾತ್ರ
ಸಿದ್ದಾರೂಡ ಕಂಬಳಿ ಸಲ್ಲಿಸಿದ ದೂರಿನ ಪ್ರಕಾರ, ಈ ಅಕ್ರಮದಲ್ಲಿ ಕೇವಲ ಮಾಜಿ ಸಚಿವ ಎಸ್.ಆರ್. ಪಾಟೀಲ್ ಮಾತ್ರವಲ್ಲದೆ, ಪ್ರಸ್ತುತ ಸಚಿವರಾದ ಶಿವಾನಂದ ಪಾಟೀಲ್, ಆರ್.ವಿ. ತಿಮ್ಮಾಪುರ ಹಾಗೂ ಕೆಲ ಸರ್ಕಾರಿ ಅಧಿಕಾರಿಗಳೂ ಭಾಗಿಯಾಗಿದ್ದಾರೆ ಎಂಬ ಆರೋಪ ಹೊರಬಿದ್ದಿದೆ. ಅಕ್ರಮ ಟೆಂಡರ್ ಪ್ರಕ್ರಿಯೆಯಿಂದ ಸರ್ಕಾರಕ್ಕೆ ಮಾತ್ರವಲ್ಲ, ರೈತರಿಗೂ ಆರ್ಥಿಕ ಹಾನಿ ಸಂಭವಿಸಿದೆ. ರೈತರ ಹಕ್ಕಿನ ಹಣವನ್ನು ಕಸಿದುಕೊಂಡಂತೆಯೇ ಈ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ.
ಲೋಕಾಯುಕ್ತ ತನಿಖೆಗೆ ಆಗ್ರಹ
ದೂರುದಾರ ಸಿದ್ದಾರೂಡ ಕಂಬಳಿ ಅವರು ಲೋಕಾಯುಕ್ತಕ್ಕೆ ಸಲ್ಲಿಸಿದ ಮನವಿಯಲ್ಲಿ, ಈ ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ಮಾಡಿ, ಅಕ್ರಮದಲ್ಲಿ ಭಾಗಿಯಾದ ಎಲ್ಲಾ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ
ಈ ಆರೋಪಗಳು ಹೊರಬಿದ್ದ ಬೆನ್ನಲ್ಲೇ ಬಾಗಲಕೋಟೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಹೊರಬಿದ್ದ ಈ ಆರೋಪ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯಕ್ಕೂ ತೀವ್ರ ಕಿರಿಕಿರಿ ಉಂಟುಮಾಡುವ ಸಾಧ್ಯತೆಗಳಿವೆ.