ಸುವರ್ಣವಾಹಿನಿ ಸುದ್ದಿ
ಕಂಪ್ಲಿ, ಜೂ.೧೮: ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಎರಡು ಕರಡಿಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯಿಂದ ಅವುಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿ ಒಂದು ಕರಡಿಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಮತ್ತೊಂದು ಕರಡಿ ಮೆಟ್ರಿ ಗುಡ್ಡದ ಕಡೆಗೆ ಓಡಿ ಹೋಗಿದೆ.
ಗ್ರಾಮದ ಅಮರೇಗೌಡ ಎನ್ನುವರು ವಾಯುವಿಹಾರಕ್ಕೆ ತೆರಳಿದಾಗ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಬಳಿಯಲ್ಲಿ ಎರಡು ಕರಡಿಗಳು ಕಾಣಿಸಿಕೊಂಡಿವೆ. ತಕ್ಷಣ ಗ್ರಾಮಕ್ಕೆ ಮರಳಿದ ಅವರು ಗ್ರಾಮದ ಜನತೆಗೆ ವಿಷಯವನ್ನು ತಲುಪಿಸಿದ್ದಾರೆ. ನಂತರ ಎರಡು ಕರಡಿಗಳು ಗ್ರಾಮದಲ್ಲಿ ಕಾಣಿಸಿಕೊಂಡಿವೆ. ಸ್ಥಳೀಯರು ಗಲಾಟೆ ಮಾಡಿದ್ದರಿಂದ ಒಂದು ಕರಡಿ ದೇವಸಮುದ್ರ-ಕಂಪ್ಲಿ ಸಂಪರ್ಕಿಸುವ ಕ್ರಾಸ್ ಕಡೆಗೆ ಓಡಿಹೋದರೆ ಇನ್ನೊಂದು ಕರಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ತುರಮುಂದಿ ಬಸವೇಶ್ವರ ದೇವಸ್ಥಾನದ ಕಡೆಗೆ ಓಡಿ ಹೋಗಿದೆ. ಜನರ ಗುಂಪು ಅಲ್ಲಿಂದ ಚದುರಿಸಲು ಪ್ರಯತ್ನಿಸಿದಾಗ ಗ್ರಾಮದ ಹೊರವಲಯದ ಗೋದಾಮು ಹತ್ತಿರದ ಹುಲ್ಲಿನ ಬಣವಿಯ ಬಳಿಯ ಬೇಲಿಯಲ್ಲಿ ಅವಿತುಕೊಂಡು ಕುಳುತಿದೆ.
ಈ ವಿಷಯವನ್ನು ಗ್ರಾಮದ ಹೊನ್ನೂರಪ್ಪ ಹಾಗೂ ಇತರರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಭರತ್ರಾಜ್ ಮತ್ತು ಸಿಬ್ಬಂದಿಗಳು,ಕಮಲಾಪುರದ ಅಟಲ್ಬಿಹಾರಿ ವಾಜಪೆಯಿ ಜುಯಾಲಾಜಿಕಲ್ ಪಾರ್ಕ್ನ ಸಿಬ್ಬಂದಿಗಳು ಕರಡಿಯನ್ನು ಹಿಡಿಯಲು ಬಲೆ ಮತ್ತು ಬೋನಿನೊಂದಿಗೆ ಆಗಮಿಸಿ ಹುಲ್ಲಿನ ಬಣವಿಯ ಹತ್ತಿರದ ಬೇಲಿಯಲ್ಲಿ ಅವಿತೊಂದು ಕುಳಿತಿದ್ದ ಕರಡಿಯನ್ನು ಬಲೆಯಿಂದ ಹಿಡಿದು ನಂತರ ಬೋನಿಗೆ ಸ್ಥಳಾಂತರಿಸಿ ಅದನ್ನು ಕರಡಿಧಾಮಕ್ಕೆ ಸಾಗಿಸಿದರು.
ವಲಯ ಅರಣ್ಯಾಧಿಕಾರಿ ಭರತ್ ರಾಜ್ ಮಾತನಾಡಿ ಗ್ರಾಮದಲ್ಲಿ ಎರಡು ಕರಡಿಗಳು ಕಾಣಿಸಿಕೊಂಡಿದ್ದು, ಒಂದು ಕರಡಿ ಮೆಟ್ರಿಯ ಗುಡ್ಡದ ಕಡೆಗೆ ಓಡಿ ಹೋಗಿದೆ, ಇನ್ನೊಂದು ಬೇಲಿಯಲ್ಲಿ ಅವಿತುಕೊಂಡಿತ್ತು.ಅದನ್ನು ಸೆರೆ ಹಿಡಿದಿದ್ದು, ಅದನ್ನು ಕರಡಿಧಾಮಕ್ಕೆ ಸಾಗಿಸಿದ್ದು,ಅಲ್ಲಿ ಕರಡಿಯ ಆರೋಗ್ಯ ಮತ್ತು ಚಲನವಲನಗಳನ್ನು ಪರಿಶೀಲಿಸಿ ನಂತರ ಕರಡಿಧಾಮದ ಅರಣ್ಯದಲ್ಲಿ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಕರಡಿಯನ್ನು ಹಿಡಿಯುವ ಮುನ್ನ ಅಲ್ಲಿ ಸೇರಿದ್ದ ಸಾರ್ವಜನಿಕರನ್ನು ನಿಯಂತ್ರಿಸಲು ಸಿಬ್ಬಂದಿಗಳು ಹರಸಾಹಸ ಪಟ್ಟರು.
ಕರಡಿಯನ್ನು ಸೆರೆ ಹಿಡಿಯುವಲ್ಲಿ ಹೊಸಪೇಟೆ ವಲಯ ಅರಣ್ಯಾಧಿಕಾರಿ ಭರತ್ ರಾಜ್, ಉಪವಲಯ ಅರಣ್ಯಾಧಿಕಾರಿ ಪರಶುರಾಮ್, ಗಸ್ತು ಅರಣ್ಯ ಪಾಲಕ ರಾಘವೇಂದ್ರ, ಅರಣ್ಯ ವೀಕ್ಷಕ ನಾಗರಾಜ್, ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜುಯಲಾಜಿಕಲ್ ಪಾರ್ಕ್ನ ಸಿಬ್ಬಂದಿಗಳು ಭಾಗವಹಿಸಿದ್ದರು.