ತುಮಕೂರು ಜ 18: ವರದಿಗಾರಿಕೆ ವೃತ್ತಿಪರವಾಗಿದ್ದಾಗ ಸಮಾಜದ ಪರವಾಗಿರುತ್ತದೆ. ಪತ್ರಿಕಾ ವೃತ್ತಿ ಉದ್ಯಮ ಆದ ಕೂಡಲೇ ಇದರ ಉದ್ದೇಶಗಳು ಬದಲಾಗುತ್ತವೆ.
ವಸ್ತು ಸ್ಥಿತಿ ಜೊತೆಗೆ ಮೌಲ್ಯಧಾರಿತ ಸುದ್ದಿ ಇಂದಿನ ಅಗತ್ಯ. ಊಹಾ (ಕಲ್ಪಿತ) ಪತ್ರಿಕೋದ್ಯಮ ಅಪಾಯಕಾರಿ ಎಂದು ಸಿ.ಎಂ. ಸಿದ್ದರಾಮಯ್ಯ ಅವರು ಕರೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಸಿದ್ಧಾರ್ಥ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ಆಶಯಗಳನ್ನು ಈಡೇರಿಸುವುದೇ ಪತ್ರಿಕಾ ವೃತ್ತಿಯ ಕರ್ತವ್ಯ. ಧ್ವನಿ ಇಲ್ಲದವರ ಪರವಾಗಿ ವೃತ್ತಿ ಇದ್ದಾಗ ಸಮಾಜಕ್ಕೆ ಅನುಕೂಲ. ಸಮಾಜದಲ್ಲಿರುವ ಮೇಲು, ಕೆಳ ಜಾತಿಗಳ ನಡುವಿನ ತಾರತಮ್ಯ ಮತ್ತು ಅಸಮಾನತೆ ಕೊನೆಯಾಗುವ ದಿಕ್ಕಿನಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಕರೆ ನೀಡಿದರು.
ನಿಮ್ಮ ವಿಶೇಷ ಸಂಚಿಕೆ ನೀವೂ ಓದಿ
ಈಗ ವೇದಿಕೆಯಲ್ಲಿ ಬಿಡುಗಡೆಯಾದ ನಿಮ್ಮದೇ ವಿಶೇಷ ಸಂಚಿಕೆ ನೀವೂ ಓದಿ. ಪತ್ರಕರ್ತರ ಕರ್ತವ್ಯ , ಸವಾಲುಗಳ ಪಟ್ಟಿ ಇದೆ. ಅದನ್ನು ಓದಿ, ಪಾಲಿಸಿ ಎಂದರು,
ಜನ ಪತ್ರಕರ್ತರ ಮೇಲೆ ನಂಬಿಕೆ ಇಟ್ಟಿದ್ದಾರೆ. ಮೌಡ್ಯದ ಸುದ್ದಿಗಳನ್ನು , ಚರ್ಚೆಗಳನ್ನು ನಡೆಸಿ ನೋಡುಗರ, ಓದುಗರ ದಾರಿ ತಪ್ಪಿಸಬೇಡಿ ಎಂದರು.
ವಿಜ್ಞಾನ, ತಂತ್ರಜ್ಞಾನದ ವೇಗದಲ್ಲೇ ಪತ್ರಿಕೋದ್ಯಮ ಬೆಳೆಯುತ್ತಿದೆ. ಇದು ಅವಕಾಶ , ಸವಾಲು ಎರಡೂ ಆಗಿದೆ ಎಂದರು.
ದೇಶದ ಪ್ರತಿಯೊಬ್ಬರೂ ಸಂವಿಧಾನ ಓದಬೇಕು. ಆಗ ಹಕ್ಕು-ಕರ್ತವ್ಯ ಎರಡೂ ಗೊತ್ತಾಗುತ್ತದೆ. ನಿಮ್ಮದು ಶಕ್ತಿಯುತ ಮಾಧ್ಯಮ. ಜನ ನಿಮ್ಮ ಕಡೆ ನೋಡ್ತಾ ಇದ್ದಾರೆ. ಈ ಎಚ್ಛರಿಕೆ ಸದಾ ಇರಲಿ ಎಂದರು.
ಕೆಲವೇ ದಿನದಲ್ಲಿ ಬಸ್ ಪಾಸ್
ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಸದ್ಯದಲ್ಲೇ ನಿಮ್ಮ ಕೈ ಸೇರಲಿದೆ, ಪತ್ರಕರ್ತರ ಕುಟುಂಬಕ್ಕೆ ಆರೋಗ್ಯ ವಿಮೆ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ಪತ್ರಕರ್ತರ ಮಾಸಾಶನವನ್ನೂ 3 ಸಾವಿರದಿಂದ 12 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದರು.
ಮೊದಲಿಗೆ ಸಮ್ಮೇಳನದ ಆವರಣದಲ್ಲಿ ಆಯೋಜಿಸಿದ್ದ ಸ್ಟಾಲ್ ಗಳನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು ಮಹಿಳಾ ಸ್ವ ಸಹಾಯ ಸಂಘಗಳು ಸಿದ್ದಪಡಿಸಿದ ತಿಂಡಿ ಸವಿದರು.
ಕೆ.ವಿ.ಪ್ರಭಾಕರ್ ಅವರಿಗೆ ಅಭಿನಂಧಿಸಿದ ಸಮ್ಮೇಳನ
ರಾಜ್ಯದ ಪತ್ರಕರ್ತ ಸಮುದಾಯದ ವೃತ್ತಿಪರ ಸಮಸ್ಯೆಗಳಿಗೆ ಅತ್ಯಂತ ಸಹೃದಯತೆಯಿಂದ ಸ್ಪಂದಿಸಿ, ಪರಿಹಾರ ಒದಗಿಸಿಕೊಡುತ್ತಿರುವುದರ ಜೊತೆಗೆ ಸಮ್ಮೇಳನದ ಯಶಸ್ಸಿಗೆ ಸಕಲ ರೀತಿಯಲ್ಲಿ ಸಂಪೂರ್ಣ ಸಹಕಾರ ನೀಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಸಮ್ಮೇಳನ ವಿಶೇಷ ಅಭಿನಂದನೆ ಸಲ್ಲಿಸಿತು.
ರಾಜಣ್ಣ ನೀನು ಮನುಸ್ಮೃತಿ ಓದು :
ಪತ್ರಕರ್ತರ 39ನೇ ರಾಜ್ಯ ಸಮ್ಮೇಳನದ ಉದ್ಘಾಟನಾ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮನುಸ್ಮೃತಿ ಓದಲು ಹೇಳಿದ ಪ್ರಸಂಗ ನಡೆಯಿತು.
ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಸಮಾಜದಲ್ಲಿರುವ ಜಾತಿ ತಾರತಮ್ಯವನ್ನು ಉಲ್ಲೇಖಿಸಿ ಮಾತನಾಡುವಾಗ ಮೇಲು “ಜಾತಿ-ಕೆಳ ಜಾತಿ” ಎನ್ನುವ ಪದ ಬಳಸಿದರು.
ಈ ವೇಳೆ ಸಚಿವ ರಾಜಣ್ಣ ಅವರು ಮೇಲುಜಾತಿ-ಕೆಳಜಾತಿ ಎನ್ನುವ ಬದಲಿಗೆ ಮುಂದುವರೆದವರು, ಹಿಂದುಳಿದವರು ಎಂದು ಹೇಳಬಹುದು ಎಂದರು.
ಇದಕ್ಕೆ ಆಕ್ಷೇಪಿಸಿದ ಸಿಎಂ, ಜಾತಿ ಅನ್ನುವುದು ಈ ಸಮಾಜದ ವಾಸ್ತವ. ನೀನು ಮನುಸ್ಮೃತಿ ಓದಿದರೆ ಈ ಬಗ್ಗೆ ಇನ್ನಷ್ಟು ಸ್ಪಷ್ಟವಾಗುತ್ತದೆ. ಜಾತಿಯ ತಾರತಮ್ಯ ಎಷ್ಟು ಭೀಕರವಾಗಿದೆ ಎಂದು ಗೊತ್ತಾಗಬೇಕಾದರೆ ಅದಕ್ಕೆ ಮನುಸ್ಮೃತಿ ಓದು ಎಂದರು.
ಈ ಬಗ್ಗೆ ಕೆಲ ಕ್ಷಣ ಇಬ್ಬರ ನಡುವೆ ಚರ್ಚೆ ನಡೆಯಿತು. ಬಳಿಕ, ಮುಖ್ಯಮಂತ್ರಿಗಳು “ನಾನು ಮೇಲು ಜಾತಿ-ಕೆಳ ಜಾತಿ ಅಂತಲೇ ಬಳಸ್ತೀನಿ. ಇದು ನನ್ನ ಸ್ವಾತಂತ್ರ್ಯ, ನೀವು ಹಿಂದುಳಿದವರು-ಮುಂದುವರೆದವರು ಅಂತಲೇ ಬಳಸಿ ಎಂದು ನಗೆಚಟಾಕೆ ಹಾರಿಸಿ ಭಾಷಣ ಮುಂದುವರೆಸಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ರಾಜ್ಯ ಸರಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿ ಜಿಲ್ಲೆಯ ಶಾಸಕರುಗಳು ಹಾಗೂ ಹಲವು ಪ್ರಮುಖರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.