ಬೆಂಗಳೂರು, ಅ. 24 :ಬೆಂಗಳೂರಿನ ಅಶ್ವಿನಿ ಅಂಗಡಿ ಟ್ರಸ್ಟ್ನ `ಬೆಳಕು ಅಕಾಡಮಿ’ ಅಂಗವಿಕಲರಿಗಾಗಿ ನೂತನವಾಗಿ ಪ್ರಾರಂಭಿಸಿರುವ ವಸತಿ ಶಾಲೆಯ ಉದ್ಘಾಟನೆಯು ಗುರುವಾರ ನೆರವೇರಿದೆ.
ಅಶ್ವಿನಿ ಅಂಗಡಿ ಟ್ರಸ್ಟ್ ಶಾಲಾ ಕಟ್ಟಡವನ್ನು ಉದ್ಘಾಟನೆ ಮಾಡಿದ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು, ವಿಶೇಷ ಚೇತನರನ್ನು ಸ್ವೀಕರಿಸಲು ಸಮಾಜ ಸಿದ್ದವಿಲ್ಲ. ವಿಶೇಷ ಚೇತರನ್ನು ಪ್ರತಿಯೊಬ್ಬರೂ ಸ್ವೀಕರಿಸಿ, ಪ್ರೀತಿಯಿಂದ – ಮಾನವೀಯತೆಯಿಂದ ಗೌರವ ಕೊಡಬೇಕು. ವಿಶೇಷ ಚೇತನರ ಸರ್ವಾಂಗೀಣ ಪ್ರಗತಿಗಾಗಿ – ಅಭಿವೃದ್ಧಿಗಾಗಿ ಬದ್ಧತೆಯನ್ನು ತೋರಿಸಬೇಕು. ಅಶ್ವಿನಿ ಅಂಗಡಿ ಅವರು ಹೆಣ್ಣಾಗಿ ಮಾಡಿರುವ ಈ ಸಾಧನೆ ಶ್ಲಾಘನೀಯ. ಪ್ರಶಂಸನೀಯ. ಅಶ್ವಿನಿ ಅವರ ಈ ಸಾಧನೆ ಅನೇಕರಿಗೆ ಪ್ರೇರಣೆ ನೀಡಲಿ, ಸಾಧನೆಗೆ ಪ್ರೋತ್ಸಾಹ ನೀಡಲಿ. ಇವರು ಅಜರಾಮರರಾಗಲಿ ಎಂದು ಹಾರೈಸಿದರು.
ಎಸ್ಇಜಿ ಆಟೋಮೋಟಿವ್ ಇಂಡಿಯಾ ಪ್ರೈ.ಲಿ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್ ಅವರು, ನಮ್ಮ ಶ್ರಮಕ್ಕೆ ಪೂರಕವಾಗಿ ಭಗವಂತನ ಆಶೀವಾರ್ದ ಸೇರಿದಲ್ಲಿ ಅಭಿವೃದ್ಧಿ ಮತ್ತು ಸಾಧನೆ ಸುಲಭ ಸಾಧ್ಯ. ಖಾಸಗಿ ಕಂಪನಿಗಳ ಸಿಎಸ್ಆರ್ ನಿಧಿಯಿಂದ ವಿಕಲ ಚೇತನರನ್ನು ಮುಖ್ಯವಾಹಿನಿಗೆ ತರಬಹುದು ಎಂದರು.
ಯಲಹAಕ ಶಾಸಕ ವಿಶ್ವನಾಥ್, ಅಶ್ವಿನಿ ಅಂಗಡಿ ಅವರ ಸಾಧನೆ ಅನೇಕರಿಗೆ ಸ್ಫೂರ್ತಿ ನೀಡುತ್ತದೆ ಎಂದರು.
ಹಿರಿಯ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರು, ಕಣ್ಣು ಇದ್ದರೂ ಅಂಧರಾಗಿರುವ ಸಾಕಷ್ಟು ಜನರು ನಮ್ಮ ಸುತ್ತಲಿದ್ದಾರೆ. ಅಂಗವಿಕಲತೆ ದೇಹದಲ್ಲಿ ಮಾತ್ರವಿದೆ. ಮೆದುಳಿನ ಅಂಗವಿಕಲತೆಯೂ ಕೂಡ ಅಂಗವಿಕಲತೆ ಎಂದು ಕರೆಯಬೇಕಾಗುತ್ತದೆ. ಆದರೆ, ಅಶ್ವಿನಿ ಅಂಗಡಿ ಕಣ್ಣು ಇಲ್ಲದೆ ಇರುವುದು ಅಂಧರ ಬದುಕಿಗೆ ವರದಾನವಾಗಿದೆ. ನಾವೆಲ್ಲರೂ ಸೇರಿಕೊಂಡು ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸೋಣ.ನಾವು, ಸೂರ್ಯನಾಗಲು ಸಾಧ್ಯವಿಲ್ಲ, ಆದರೆ, ಅನೇಕರ ಬಾಳಿಗೆ ಸಣ್ಣ ದೀಪವಾಗಿ ಬೆಳಕು ಮೂಡಿಸೋಣ ಎಂದರು.
ಶ್ರೀಶ್ರೀಶ್ರೀ ಡಾ. ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಸಾನಿಧ್ಯವಹಿಸಿದ್ದರು. ಪತ್ರಕರ್ತ ಶಶಿಧರ ಮೇಟಿ, ನಿರ್ದೇಶಕ ನಟರಾಜ. ಎಸ್, ಸಾಹಿತಿ ನಾಗತಿಹಳ್ಳಿ ರಮೇಶ್ ಮಾತನಾಡಿದರು. ಅಶ್ವಿನಿ ಅಂಗಡಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಾಧಕರು ಉಪಸ್ಥಿತರಿದ್ದರು.